ಉಭಯ ಸದನಗಳ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಒಟ್ಟು 13 ದಿನಗಳ ಕಾಲ ಸುಮಾರು 60 ಗಂಟೆ 10 ನಿಮಿಷಗಳ ಕಾಲ ಕಾರ್ಯ-ಕಲಾಪ ನಡೆಸಲಾಗಿದೆ.
ಗುರುವಾರ ವಿಧಾನಸಭೆಯ ಭೋಜನ ವಿರಾಮದ ಬಳಿಕ ಸ್ಪೀಕರ್ ಯು.ಟಿ.ಖಾದರ್, ‘ಫೆ.12ರಂದು ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದ್ದು, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ 12 ಸದಸ್ಯರು ಒಟ್ಟು 10 ಗಂಟೆ 17 ನಿಮಿಷಗಳ ಕಾಲ ಭಾಗವಹಿಸಿದ್ದಾರೆ. ವಂದನಾ ನಿರ್ಣಯದ ಪ್ರಸ್ತಾವವನ್ನು ಫೆ.20ರಂದು ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.
ಒಟ್ಟು 43 ಅಧಿಸೂಚನೆಗಳು ಮತ್ತು 162 ವಾರ್ಷಿಕ ವರದಿಗಳು, 163 ಲೆಕ್ಕ ಪರಿಶೋಧನಾ ವರದಿಗಳು, 4 ಅನುಪಾಲನ ವರದಿಗಳು, 6 ಅನುಸರಣಾ ವರದಿ ಹಾಗೂ 3 ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಧನವಿನಿಯೋಗ ವಿಧೇಯಕಗಳೂ ಸೇರಿದಂತೆ ಒಟ್ಟು 26 ವಿಧೇಯಕಗಳನ್ನು ಮಂಡಿಸಿ, ಅಂಗೀಕರಿಸಲಾಗಿದೆ. 2024ನೆ ಸಾಲಿನ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯದತ್ತಿಗಳ (ತಿದ್ದುಪಡಿ) ವಿಧೇಯಕ’ವನ್ನು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ.
ನಿಯಮ 60ರ ಅಡಿಯಲ್ಲಿ ನೀಡಿದ್ದ 5 ಸೂಚನೆಗಳ ಪೈಕಿ 2ನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, 1 ಸೂಚನೆಯನ್ನು ತಿರಸ್ಕರಿಸಲಾಗಿದೆ. 1 ಸೂಚನೆಯನ್ನು ರಾಜ್ಯಪಾಲರ ಭಾಷಣದ ಮೇಲೆ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ. ನಿಯಮ 69 ರಡಿಯಲ್ಲಿ ಒಟ್ಟು 6 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 2 ಸೂಚನೆಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಅವಧಿಯಲ್ಲಿ ಒಟ್ಟು 41 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದ್ದು, ಒಟ್ಟು 1,955 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಸದನದಲ್ಲಿ ಉತ್ತರಿಸಬೇಕಾಗಿದ್ದ 120 ಪ್ರಶ್ನೆಗಳ ಪೈಕಿ 117 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 1,653 ಪ್ರಶ್ನೆಗಳ ಪೈಕಿ 1,461 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ನಿಯಮ 351 ರಡಿಯಲ್ಲಿ ಸ್ವೀಕೃತವಾದ 160 ಸೂಚನೆಗಳ ಪೈಕಿ 77 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದೂ ಅವರು ಉಲ್ಲೇಖಿಸಿದರು.
ಗಮನ ಸೆಳೆಯುವ 157 ಸೂಚನೆಗಳ ಪೈಕಿ 120 ಸೂಚನಾ ಪತ್ರಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಇನ್ನೂ, ಪ್ರಕಾಶ ಕೆ. ಕೋಳಿವಾಡ ನೀಡಿರುವ ಒಂದು ಖಾಸಗಿ ವಿಧೇಯಕವನ್ನು ಸದನದಲ್ಲಿ ಮಂಡಿಸಲಾಗಿದೆ. ಶೂನ್ಯವೇಳೆಯಲ್ಲಿ ಒಟ್ಟು 21 ಸೂಚನೆಗಳನ್ನು ಸ್ವೀಕರಿಸಿದ್ದು, ಆ ಪೈಕಿ 12 ಸೂಚನೆಗಳನ್ನು ಚರ್ಚಿಸಲಾಗಿದೆ. ರಾಷ್ಟ್ರಗೀತೆಯೊಂದಿಗೆ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುತ್ತಿದ್ದೇನೆ ಎಂದು ಪ್ರಕಟಿಸಿದರು.