ಮಹಿಳೆಯರ ಸಬಲೀಕರಣವೇ ಕಾಂಗ್ರೆಸ್ ಪಕ್ಷದ ಗುರಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2024-11-08 16:22 GMT

PC:x/@laxmi_hebbalkar

ಶಿಗ್ಗಾಂವಿ : ಮಹಿಳೆಯರ ಸಬಲೀಕರಣವೇ ಕಾಂಗ್ರೆಸ್ ಪಕ್ಷದ ಗುರಿಯಾಗಿದ್ದು, ಇದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಶುಕ್ರವಾರ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಮೂಕಬಸರೀಕಟ್ಟಿ ಗ್ರಾಮದಲ್ಲಿ ಮತಯಾಚಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮನೆ ಮನೆಯಲ್ಲಿ ದೀಪ ಹಚ್ಚಲು ಹೆಣ್ಣುಮಕ್ಕಳು ಬೇಕು. ಹೆಣ್ಣು ಸಂಸಾರದ ಕಣ್ಣು. ಮನೆಯ ಹೆಣ್ಣು ಮಕ್ಕಳು ಸ್ವಾವಲಂಬಿ ಆಗಬೇಕು ಎಂಬುದೇ ಕಾಂಗ್ರೆಸ್ ಪಕ್ಷದ ಗುರಿ. ಇದಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಹಿಳೆಯರಿಗಾಗಿಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು.

ಜಾತಿ, ಧರ್ಮ ಎಂದು ಕಾಂಗ್ರೆಸ್ ಪಕ್ಷ ಹೊಡೆದಾಡುವುದಿಲ್ಲ. ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುವುದು, ಬಡವರನ್ನು ಬಡವರನ್ನಾಗಿಯೇ ಮಾಡುವುದು ಬಿಜೆಪಿಯ ಗುರಿ. ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಕಳೆದ ಚುನಾವಣೆಯಲ್ಲಿ ಯಾಸೀರ್ ಖಾನ್ ಪಠಾಣ್ ಸೋತರೂ ಕ್ಷೇತ್ರದಲ್ಲಿ ಜನರ ಸೇವೆ ಮಾಡುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯ ಸರಕಾರ ಪ್ರತಿ ಕುಟುಂಬಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಪ್ರತಿ ಮನೆಗೂ ಕಾಂಗ್ರೆಸ್ ಅನುಕೂಲ ಮಾಡಿದೆ. ಮಹಿಳೆಯರು ಸಂಘಟನೆ ಆಗಲು ಕಾಂಗ್ರೆಸ್ ಪಕ್ಷವೇ ಕಾರಣ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದರೆ, ಈಗ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ವಿನಯ್ ಕುಲಕರ್ಣಿ, ಮುಖಂಡರಾದ ಶಿವಾನಂದ್ ಚಿಂತೂರು, ಶಿವಪ್ಪ ಮುಧೋಳ, ಮೆಹಬೂಬ್ ನದಾಫ್, ಮಹೇಶ್ ಅಪ್ಪಣ್ಣವರ್, ಶಂಬು ಆಜೂರ್, ಶಿವಾನಂದ ಬಾಗೂರ್, ಶಂಕರ್, ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News