ಅಂಬೇಡ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ: ಅಜ್ಜಂಪೀರ್ ಖಾದ್ರಿ ಸ್ಪಷ್ಟಣೆ
ಹಾವೇರಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಗುರು. ನಾನು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ ಎಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಹುಲಗೂರಿನಲ್ಲಿರುವ ಬಾಲಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಆದಿ ಜಾಂಬವ ಸಮಾವೇಶದಲ್ಲಿ ನಾನು ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಅಂಬೇಡ್ಕರ್ ಬಗ್ಗೆ ತಪ್ಪು ಮಾತನಾಡಿದ್ದರೆ ನನ್ನ ತಲೆ ಕತ್ತರಿಸಿಕೊಳ್ಳುವೆ. ಅಂಬೇಡ್ಕರ್ ಇಸ್ಲಾಮ್ ಧರ್ಮ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು ಎಂಬುದರ ಬಗ್ಗೆ ನಾನು ಎಲ್ಲೋ ಕೇಳಿದ್ದೆ. ಆ ಬಗ್ಗೆ ಮಾತ್ರ ನಾನು ಮಾತನಾಡಿದ್ದೆ ಎಂದು ಅವರು ಹೇಳಿದರು.
ನನ್ನ ಹೇಳಿಕೆಯನ್ನು ಇಟ್ಟುಕೊಂಡು ವಿವಾದ ಎಂದು ಬಿಂಬಿಸುತ್ತಿದ್ದಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ನಮಗೆ ಅಪಾರ ಗೌರವ ಇದೆ. ಈಗ ಚುನಾವಣೆಯಿಂದಾಗಿ ನನ್ನ ಹೇಳಿಕೆ ಹೆಚ್ಚು ಚರ್ಚೆ ಆಗುತ್ತಿದೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದರು.
ಶಿಗ್ಗಾಂವಿಯಲ್ಲಿ ಬಿಜೆಪಿ ಆಟ ನಡೆಯುವುದಿಲ್ಲ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಗೆಲವು ಖಚಿತ. ಬೊಮ್ಮಾಯಿಯನ್ನು ಶಿಗ್ಗಾಂವಿ ಕ್ಷೇತ್ರದ ಜನತೆ ಮನೆಗೆ ಕಳುಹಿಸುತ್ತಾರೆ ಎಂದು ಅಜ್ಜಂಪೀರ್ ಖಾದ್ರಿ ವಿಶ್ವಾಸ ವ್ಯಕ್ತಪಡಿಸಿದರು.