ಶಿಗ್ಗಾಂವಿಯಲ್ಲಿ ಬಾಯ್ ಬಾಯ್ ಬೊಮ್ಮಾಯಿ’ ಎನ್ನುತ್ತಿದ್ದಾರೆ : ಯಾಸೀರ್ ಅಹ್ಮದ್ ಖಾನ್
ಹಾವೇರಿ : ಸಂತರ ನಾಡು ಶಿಗ್ಗಾಂವಿಯಲ್ಲಿ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಮತದಾನ ಮಾಡಲು ಹೊರಗೆ ಬರುತ್ತಿರುವ ಮತದಾರರು ‘ಬಾಯ್ ಬಾಯ್ ಬೊಮ್ಮಾಯಿ’ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದ್ದಾರೆ.
ಬುಧವಾರ ಶಿಗ್ಗಾಂವಿಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ದೊಡ್ಡವರು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಕಳೆದ ಚುನಾವಣೆಯಲ್ಲಿ ನಮಗೆ ಕಡಿಮೆ ಸಮಯಾವಕಾಶ ಇತ್ತು. ಆದುದರಿಂದ, ಅವರು ಗೆಲುವು ಸಾಧಿಸಿದ್ದರು ಎಂದರು.
ನಮಗೆ ಸ್ಪಲ್ಪ ಹೆಚ್ಚು ಸಮಯ ಸಿಕ್ಕಿದ್ದರೆ ನಮ್ಮ ಕ್ಷೇತ್ರದ ಜನರು ಆಗಲೇ ಬಸವರಾಜ ಬೊಮ್ಮಾಯಿಗೆ ‘ಬಾಯ್’ ಹೇಳುತ್ತಿದ್ದರು. ಹಾನಗಲ್ ಉಪಚುನಾವಣೆ ನಡೆದಾಗ ಅವರು ಮುಖ್ಯಮಂತ್ರಿ ಆಗಿದ್ದರು. ಆದರೂ, ಬಿಜೆಪಿ ಸೋಲು ಅನುಭವಿಸಿತ್ತು ಎಂದು ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.
ಬಸವರಾಜ ಬೊಮ್ಮಾಯಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ನಮಗೆ ಎಲ್ಲ ಸಮುದಾಯದ ಜನರು ಬೆಂಬಲ ನೀಡಿದ್ದಾರೆ. ಈ ಬಾರಿ ನಮಗೆ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.