ಹಾವೇರಿ | ಚರಂಡಿಯಲ್ಲಿ ಬ್ಯಾಲೆಟ್ ಬಾಕ್ಸ್ ಪತ್ತೆ ಪ್ರಕರಣ: ಐವರು ಆರೋಪಿಗಳ ಬಂಧನ
ಹಾವೇರಿ: ಹಳೆಯ ಬ್ಯಾಲೆಟ್ ಬಾಕ್ಸ್ಗಳನ್ನು ಕಳ್ಳತನ ಮಾಡಿದ್ದ ಆರೋಪದಲ್ಲಿ ಐವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬ್ಯಾಲೆಟ್ ಬಾಕ್ಸ್ ಕಳ್ಳತನ ಮಾಡಿದ್ದ ನಾಲ್ವರು ಮತ್ತು ಅದನ್ನು ಖರೀದಿಸಿದ್ದ ವ್ಯಕ್ತಿಸೇರಿ ಐವರನ್ನು ಬಂಧಿಸಲಾಗಿದೆ. ಸಂತೋಷ ಮಾಳಗಿ, ಗಣೇಶ ಹರಿಜನ, ಮುತ್ತಪ್ಪ ದೇವಿಹೊಸೂರು, ಕೃಷ್ಣ ಹರಿಜನ ಮತ್ತು ಮಹ್ಮದ್ ಜಾವಿದ್ ಬಂಧಿತ ಆರೋಪಿಗಳು. ಬಂಧಿತರು ಹಾವೇರಿಯ ಸುಭಾಷ್ ನಗರ, ಪುರದ ಓಣಿ, ಗುತ್ತಲ್ಲ, ಯತ್ತಿನಹಳ್ಳಿ ಗ್ರಾಮದವರು ಎಂದು ತಿಳಿದಿದೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿನಹಳ್ಳಿ ಗ್ರಾಮದ ಬಳಿಯ ಲೇಔಟ್ ವೊಂದರಲ್ಲಿ 10 ಬ್ಯಾಲೆಟ್ ಬಾಕ್ಸ್‌ಗಳು ಪತ್ತೆಯಾಗಿತ್ತು. ಈ ಕುರಿತು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ರಾಜ್ಯಾದ್ಯಾಂತ ಚರ್ಚೆಗೆ ಕಾರಣವಾಗಿತ್ತು.
ಎಪಿಎಂಸಿ ಗೋಡೌನ್ ಗೆ ನುಗ್ಗಿ ಹಳೆಯ ಬ್ಯಾಲೆಟ್ ಬಾಕ್ಸ್ ಗಳನ್ನು ಕಳ್ಳತನ ಮಾಡಲಾಗಿತ್ತು. ಹಾವೇರಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಬಂಧಿತರಿಂದ ಒಂದು ಬಜಾಜ್ ಆಟೋರಿಕ್ಷಾ ಹಾಗೂ 27 ಬ್ಯಾಲೆಟ್ ಬಾಕ್ಸ್ಗಳನ್ನು ಹಾವೇರಿ ಶಹರ ಪೊಲೀಸರು ವಶಪಡಿಸಿಕೊಂಡಿದ್ದಾರೆ.