ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು| ಕಾಂಗ್ರೆಸ್ ಹಣದ ಹೊಳೆ ಹರಿಸಿದೆ: ಭರತ್ ಬೊಮ್ಮಾಯಿ ಆರೋಪ
ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂದು ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಆರೋಪಿಸಿದ್ದಾರೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಅವರಿಗೆ ತೀವ್ರ ಹಿನ್ನಡೆಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಕಾಂಗ್ರೆಸ್ ಕೈವಶ ಮಾಡಿಕೊಂಡಿದೆ.
ಮತ ಎಣಿಕೆಯ ಪ್ರಾರಂಭದಲ್ಲೇ ಸ್ಥಳಕ್ಕೆ ಆಗಮಿಸಿದ್ದ ಭರತ್ ಅವರು ಸೋಲು ಖಚಿತವಾಗುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದಾರೆ.
ಈ ಸಂದರ್ಭ ಸುದ್ದಿ ಗಾರರೊಂದಿಗೆ ಮಾತನಾಡಿದ ಭರತ್ ಬೊಮ್ಮಾಯಿ ಅವರು,ಕಾಂಗ್ರೆಸ್ ಹಣದ ಹೊಳೆ ಹರಿಸಿದೆ. ಸೋಲಿನ ಕಾರಣಗಳ ಬಗ್ಗೆ ಬೂತ್ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ಶಿಗ್ಗಾಂವಿ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.