ಶಿಗ್ಗಾಂವಿ: ಉಪಚುನಾವಣೆ ಮುಗಿದ ಮರುದಿನವೇ ಬ್ಯಾಲೆಟ್ ಬಾಕ್ಸ್‌ಗಳು ಚರಂಡಿಯಲ್ಲಿ ಪತ್ತೆ

Update: 2024-11-14 09:39 GMT

ಹಾವೇರಿ : ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿ‌ನಹಳ್ಳಿ ಗ್ರಾಮದ ಬಳಿಯ ಲೇಔಟ್ ವೊಂದರಲ್ಲಿ 10 ಬ್ಯಾಲೆಟ್ ಬಾಕ್ಸ್‌ಗಳು ಪತ್ತೆಯಾಗಿವೆ.

 ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರವಷ್ಟೇ ಮುಗಿದಿದೆ. ಇದರ ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್‌ಗಳು ಸಿಕ್ಕಿವೆ. ಇದರಿಂದ ಗ್ರಾಮಸ್ಥರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ.

ʼಯತ್ತಿನಗಳ್ಳಿ ಗ್ರಾಮದ ಬಳಿ ನಿರುಪಯುಕ್ತ ಬ್ಯಾಲೆಟ್ ಬಾಕ್ಸ್ ಪತ್ತೆಯಾಗಿದ್ದು, ಬಳಕೆಯಲ್ಲಿ ಇಲ್ಲದ ಬ್ಯಾಲೆಟ್ ಬಾಕ್ಸ್ ಗಳನ್ನು ಎಪಿಎಂಸಿ ಗೋದಾಮಿನಲ್ಲಿ ಇರಿಸಲಾಗಿತ್ತು. ಈ ಬಾಕ್ಸ್ ಗಳು ಬಳಕೆಯಲ್ಲಿ‌ ಇರಲಿಲ್ಲ. ಶಿಗ್ಗಾಂವಿ ಉಪಚುನಾವಣೆಗೂ ಈ ಬಾಕ್ಸ್ ಗಳಿಗೂ ಸಂಬಂಧ ಇಲ್ಲʼ ಎಂದ ಕಂದಾಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹಾವೇರಿ ನಗರದ ಎಪಿಎಂಸಿಯಲ್ಲಿ ಇರುವ ಒಂದು ಹಳೆ ಗೋದಾಮಿನಲ್ಲಿ ಹಳೆಯ ನಿರುಪಯುಕ್ತ ಬ್ಯಾಲೆಟ್ ಬಾಕ್ಸ್ ಗಳನ್ನು ಇಡಲಾಗಿತ್ತು. ಇದನ್ನು ಕಂದಾಯ ಇಲಾಖೆಯವರು ಹಲವು ವರ್ಷಗಳ ಹಿಂದೆ ತಂದಿಟ್ಟಿದ್ದರು ಎನ್ನಲಾಗಿದೆ. ಅಲ್ಲದೆ, ಇದೇ ಗೋಡೌನ್‌ನಿಂದ ಕಿಡಿಗೇಡಿಗಳು ಬಾಕ್ಸ್ ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಇನ್ನು, ಬಳಕೆಯಲ್ಲಿ ಇಲ್ಲದ ಬ್ಯಾಲೆಟ್ ಬಾಕ್ಸ್​ಗಳನ್ನು ಇಟ್ಟಿದ್ದ ಗೋದಾಮಿಗೆ ಪೊಲೀಸರು ಮತ್ತು ಹಾವೇರಿ ತಹಶೀಲ್ದಾರ್ ಶರಣಮ್ಮ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪೊಲೀಸರು ಕಂದಾಯ ಇಲಾಖೆಯವರಿಂದ ದೂರು ಪಡೆದು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News