ಪ್ರಜ್ವಲ್ ಬಳಿಕ ಸಹೋದರ ಸೂರಜ್ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪ

Update: 2024-06-21 17:39 GMT

ಸೂರಜ್ ರೇವಣ್ಣ

ಹಾಸನ : ಲೈಂಗಿಕ ಹಗರಣದಲ್ಲಿ ಜೈಲು ಸೇರಿರುವ ಪ್ರಜ್ವಲ್ ರೇವಣ್ಣರ ಬಳಿಕ ಇದೀಗ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧವೂ ಲೈಂಗಿಕ ಹಗರಣದ ಆರೋಪ ಕೇಳಿ ಬಂದಿದೆ.

ಸೂರಜ್ ರೇವಣ್ಣ ಅವರು ತನ್ನನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಅರಕಲಗೂಡಿನ ಚೇತನ್ ಎಂಬಾತ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಸುಮಾರು 14ರಿಂದ 15 ಪುಟದ ದೂರು ಸಲ್ಲಿಸಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇದರ ಬೆನ್ನಿಗೇ ದೂರುದಾರ ಚೇತನ್ ವಿರುದ್ಧ ಬ್ಲಾಕ್‌ಮೇಲ್ ಆರೋಪ ಹೊರಿಸಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಹಾಗೂ ಸೂರಜ್ ಬ್ರಿಗೇಡ್‌ನ ಖಜಾಂಚಿ ಶಿವಕುಮಾರ್ ಎಚ್.ಎಲ್. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದಾರೆ.

ತನ್ನ ಮೇಲೆ ಎಂಎಲ್‌ಸಿ ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಚೇತನ್ ಎಂಬ ಯುವಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಖಾಸಗಿ ವಾಹಿನಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ಸೂರಜ್ ರೇವಣ್ಣ ವಿರುದ್ಧ ದೂರು ನೀಡಿರುವ ಚೇತನ್ ವಿರುದ್ಧ ಹೊಳೆನರಸೀಪುರ ಪಟ್ಟಣ ಠಾಣೆಯಲ್ಲಿ ಸೂರಜ್ ರೇವಣ್ಣ ಆಪ್ತ ಕಾರ್ಯದರ್ಶಿ ಶಿವಕುಮಾರ್ ದೂರು ನೀಡಿ, ಚೇತನ್ 5 ಕೋಟಿ ರೂಪಾಯಿ ಹಣಕ್ಕಾಗಿ ಬೇಡಿಕೆ ಇರಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ದೂರಿನ ಅನ್ವಯ ಚೇತನ್ ವಿರುದ್ಧ ಐಪಿಸಿ ಸೆಕ್ಷನ್ 384, 506 ಕಲಂ ಪ್ರಕರಣ ದಾಖಲಾಗಿದೆ ತಿಳಿದು ಬಂದಿದೆ.

ಚೇತನ್ ಅರೋಪವೇನು? :

‘ಸೂರಜ್ ರೇವಣ್ಣರವರು, ಜೂನ್ 16ರ ವಾಟ್ಸಪ್ ಮೂಲಕ ಮೆಸೇಜ್ ಮಾಡಿ, ಹೊಳೆನರಸೀಪುರದ ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದರು. ನಾನು ಅಲ್ಲಿಗೆ ತೆರಳಿದ್ದೆ. ಅಲ್ಲಿನ ಕೊಠಡಿಯೊಂದಕ್ಕೆ ಕರೆದುಕೊಂಡು, ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ದೇಹದ ಮೇಲೆಲ್ಲ ಗಾಯ ಮಾಡಿದ್ದಾರೆ’ ಎಂದು ಚೇತನ್ ದೂರಿನಲ್ಲಿ ಆರೋಪಿಸಿದ್ದಾನೆ ಎನ್ನಲಾಗಿದೆ.

ಸೂರಜ್ ಆಪ್ತ ಶಿವಕುಮಾರ್ ಎಂಬಾತ ಚೇತನ್ ವಿರುದ್ಧ ಪ್ರತಿ ದೂರು ನೀಡಿದ್ದು, ‘ಸೂರಜ್ ರೇವಣ್ಣ ಬಳಿ ಕೆಲಸ ಕೊಡಿಸು ಎಂದು ಅರಕಲಗೂಡಿನ ಚೇತನ್ ನನ್ನ ಬಳಿ ಕೇಳಿದ್ದ, ಅದಕ್ಕೆ , ನೀನೇ ಹೋಗಿ ಬಾಸ್ ಭೇಟಿ ಮಾಡು ಎಂದು ಫೊನ್ ನಂಬರ್ ಕೊಟ್ಟಿದ್ದೆ. ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಕೆಲಸ ಕೇಳಲು ಹೋಗಿದ್ದ, ಕೆಲಸ ಕೇಳಿ ವಾಪಸ್ಸು ಬಂದ ಬಳಿಕ ಕೆಲಸ ಕೊಟ್ಟಿಲ್ಲ ಎನ್ನುವ ಕಾರಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲ, ನನಗೆ ತುಂಬಾ ಕಷ್ಟ ಇದೆ, ನನಗೆ ಹಣ ಬೇಕು, ನೀನು ನಿಮ್ಮ ಬಾಸ್‌ನಿಂದ ಐದು ಕೋಟಿ ಹಣ ಕೊಡಿಸದಿದ್ದರೆ ಅವರ ವಿರುದ್ದ ಲೈಂಗಿಕ ದೌರ್ಜನ್ಯ ಕೇಸ್ ಕೊಡ್ತೇನೆ ಎಂದು ಬೆದರಿಸಿದ್ದಾನೆ’ ಎಂದು ದೂರಿನಲ್ಲಿ ಶಿವಕುಮಾರ್ ಆರೋಪಿಸಿದ್ದಾರೆ.

‘ಈತನ ಬೆದರಿಕೆ ವಿಷಯ ಸೂರಜ್‌ರವರಿಗೆ ತಿಳಿಸಿದೆ, ಆತ ಕೆಲಸ ಕೇಳಿಕೊಂಡು ಮನೆಗೆ ಬಂದಾಗ ಭದ್ರತೆಗಾಗಿ ಇದ್ದ ಪೊಲೀಸ್ ಸೇರಿ ಹಲವಾರು ಜನರು ಇದ್ದರು. ನಾನೇನು ತಪ್ಪು ಮಾಡಿಲ್ಲ . ಯಾಕೆ ಹಣ ಕೊಡಬೇಕು? ಎಂದು ಸೂರಜ್ ರೇವಣ್ಣ ಹೇಳಿದರು. ಜೂನ್ 18 ರಂದು ಹಾಸನದ ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು, ಅಸ್ಪತ್ರೆ ಚೀಟಿ ತೋರಿಸಿ ಐದು ಕೋಟಿಗೆ ಬೇಡಿಕೆ ಇಟ್ಟಿದ್ದ . ಕಡೆಗೆ ‘ಎರಡುವರೆ ಕೋಟಿ ಹಣ ಕೊಡಿಸಿ. ಹಣ ಕೊಡಿಸದಿದ್ದರೆ ದೊಡ್ಡ ಕುಟುಂಬದ ಮರ್ಯಾದೆ ಕಳೆಯುತ್ತೇನೆ’ ಎಂದು ಬೆದರಿಸಿದ ಎಂದು ದೂರಿನಲ್ಲಿ ಶಿವಕುಮಾರ್ ಆರೋಪಿಸಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News