‘ಶಕ್ತಿ ಯೋಜನೆ’ ಮರು ಪರಿಷ್ಕರಣೆಗೆ ಚಿಂತನೆ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಅನೇಕ ಮಂದಿ ಹೆಣ್ಣು ಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ, ಉಚಿತ ಪ್ರಯಾಣ ಬೇಡ ಎಂದು ಟ್ವೀಟ್ ಹಾಗೂ ಇ-ಮೇಲ್ ಮೂಲಕ ತಿಳಿಸುತ್ತಿದ್ದು, ‘ಶಕ್ತಿ ಯೋಜನೆ’ ಬಗ್ಗೆ ಮರುಚಿಂತನೆ ನಡೆಸಲು ಸಭೆ ಕರೆದು ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ಮುಂಭಾಗ ‘ಐರಾವತ ಕ್ಲಬ್ ಕ್ಲಾಸ್-2.0’ 20 ನೂತನ ಬಸ್ಸುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಹಣ ಕೊಡಲು ಮುಂದಾದರೂ, ನಿರ್ವಾಹಕರು ಹಣ ತೆಗೆದುಕೊಳ್ಳುತ್ತಿಲ್ಲ’ ಎಂದು ಅನುಕೂಲ ಸ್ಥಿತಿಯಲ್ಲಿರುವ ಶೇ.5ರಿಂದ 10ರಷ್ಟು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಶೀಘ್ರದಲ್ಲಿ ಇದರ ಬಗ್ಗೆ ಸಾರಿಗೆ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ ಜತೆ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚೆ ನಡೆಸುತ್ತೇವೆಂದು ‘ಶಕ್ತಿ ಯೋಜನೆ’ ಮರುಪರಿಶೀಲನೆ ಇಂಗಿತ ವ್ಯಕ್ತಪಡಿಸಿದರು.
ಐರಾವತ ಎಂದರೆ ಇಂದ್ರನ ವಾಹನ, ಆನೆ ಎಂದು ಅರ್ಥ. ಆನೆಯಂತೆ ಬಲಶಾಲಿ ಎಂದು ಅರ್ಥ. ವೋಲ್ವೋ ಸಂಸ್ಥೆಯ ಈ ಬಸ್ಸಿಗೆ 1.60 ಕೋಟಿ ರೂ. ಎಂದು ಸಂಸ್ಥೆಯವರು ಹೇಳಿದ್ದಾರೆ. ಇತ್ತೀಚಿಗೆ ನಾವು ಒಂದು ಕಾರು ತೆಗೆದುಕೊಳ್ಳಬೇಕು ಎಂದರೆ ಒಂದು ಕೋಟಿ ಮೀರುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯವು ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿಯೇ ಮಂಚೂಣಿಯಲ್ಲಿದ್ದು, 24,282 ರಾಜ್ಯ ಸಾರಿಗೆ ಬಸ್ಸುಗಳನ್ನು ಹೊಂದಿದ್ದು ಪ್ರಥಮ ಸ್ಥಾನದಲ್ಲಿದೆ. ಒಂದೇ ವರ್ಷದಲ್ಲಿ 112 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಸರಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 5,800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಈ ಪೈಕಿ ನಾಲ್ಕು ನಿಗಮಗಳಲ್ಲಿ ಹಿಂದಿನ ಒಂದು ವರ್ಷದಲ್ಲಿ 3,417 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ. ನಾಲ್ಕು ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ಸರಕಾರವು ಅನುಮತಿ ನೀಡಿದ್ದು, ಈ ಪೈಕಿ 1833, ಚಾಲಕ ಕಂ ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. 6,500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಹಿಂದಿನ ಒಂದು ವರ್ಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 1,000 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಆದೇಶ ನೀಡಲಾಗಿದೆ. ಸಾರಿಗೆ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಶ್ಲಾಘಿಸಿದರು.
ಕರ್ನಾಟಕ ಸಾರಿಗೆ ಸಂಸ್ಥೆಯನ್ನು ವ್ಯವಹಾರಕ್ಕಾಗಿ ಹುಟ್ಟುಹಾಕಿಲ್ಲ. ನಾಗರಿಕರ ಸೇವೆಗಾಗಿ ಇದನ್ನು ಮೀಸಲಿಡಲಾಗಿದೆ. ಸಂಸ್ಥೆಯಲ್ಲಿ ಶಿಸ್ತು ಬಂದಿದೆ. ಚಾಲಕರು ನಿಯಮಕ್ಕೆ ಅನುಸಾರವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಸುಮಾರು 1.80 ಕೋಟಿ ಜನರು ಪ್ರಯಾಣ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್, ಉಪಾಧ್ಯಕ್ಷ ಮುಹಮ್ಮದ್ ರಿಝ್ವಾನ್ ನವಾಬ್, ಸಾರಿಗೆ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಉಪಸ್ಥಿತರಿದ್ದರು.
20 ನೂತನ ‘ಐರಾವತ ಕ್ಲಬ್‍ಕ್ಲಾಸ್’ ಬಸ್ಸುಗಳಿಗೆ ಸಿಎಂ ಚಾಲನೆ: ಕೆಎಸ್ಸಾರ್ಟಿಸಿ ನಿಗಮದ ‘ಐರಾವತ ಕ್ಲಬ್ ಕ್ಲಾಸ್-2.0’ 20 ವೋಲ್ವೋ ಬಸ್‍ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸೌಧದ ಮುಂಭಾಗ ಹಸಿರು ಧ್ವಜ ತೋರಿಸುವುದರ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತರಾದ ಕುಟುಂಬದವರ ಮಕ್ಕಳಿಗೆ ಹಾಗೂ ಅವಲಂಬಿತರಿಗೆ 1 ಕೋಟಿ ರೂ.ಚೆಕ್‍ನ್ನು ವಿತರಿಸಿದರು.