2024-25ನೆ ಆರ್ಥಿಕ ವರ್ಷದಲ್ಲಿ ಕರ್ನಾಟಕ ಉತ್ತಮ ವಿತ್ತೀಯ ಸಾಧನೆ
ಬೆಂಗಳೂರು : ಕ್ಷಿಪ್ರ ಬೆಳವಣಿಗೆ, ತೆರಿಗೆ ಸಂಗ್ರಹದ ಹೆಚ್ಚಳ ಮತ್ತು ಅನುದಾನ ಬಳಕೆಯ ಚಾಣಾಕ್ಷತನದಿಂದ 2024-25ನೆ ಆರ್ಥಿಕ ವರ್ಷದ ಮೊದಲ ಎಳು ತಿಂಗಳಲ್ಲಿ ಕರ್ನಾಟಕವು ಆರ್ಥಿಕ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಮುಖ್ಯಮಂತ್ರಿಯ ಕಚೇರಿ ಪ್ರಕಟಣೆ ತಿಳಿಸಿದೆ.
1,03,689 ಕೋಟಿ ರೂ.ಆದಾಯವನ್ನು ಸೃಜಿಸುವ ಮೂಲಕ, 1,96,525 ಕೋಟಿ ರೂ. ವಾರ್ಷಿಕ ಗುರಿಯ ಶೇ.53ರಷ್ಟನ್ನು ಸಾಧಿಸಿದೆ. ಈ ಆದಾಯವು ಐದು ಪ್ರಮುಖ ಆದಾಯ ಇಲಾಖೆಗಳಾದ ವಾಣಿಜ್ಯ ತೆರಿಗೆ (ಜಿಎಸ್‍ಟಿ), ಅಬಕಾರಿ, ಗಣಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾರಿಗೆಗಳ ಮೂಲಕ ಸೃಜನೆಯಾಗಿದೆ.
ವಾರ್ಷಿಕ ಬೆಳವಣಿಗೆ ದರ ಶೇ.11.2ರಷ್ಟು ಇದ್ದು, ಈ ಸಾಧನೆಯು ರಾಜ್ಯದ ಸದೃಢ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ಗ್ರಾಹಕರ ಕೊಳ್ಳುವ ಸಾಮರ್ಥ್ಯ ಹಾಗೂ ಬೇಡಿಕೆಯ ಹೆಚ್ಚಳ, ಉತ್ತಮ ಆಡಳಿತ, ಉದ್ಯಮ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಸರಕಾರದ ಗುರಿಯನ್ನು ಪ್ರತಿಬಿಂಬಿಸುತ್ತದೆ.
ಕರ್ನಾಟಕವು 2023-24ರಲ್ಲಿ 3ನೇ ಸ್ಥಾನದಿಂದ (ಗುಜರಾತ್ ಅನ್ನು ಮೀರಿಸುವ ಮೂಲಕ) 2024-25ರ ಮೊದಲ ತ್ರೈಮಾಸಿಕದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗಳಲ್ಲಿ 2ನೇ ಸ್ಥಾನಕ್ಕೇರುವ ಮೂಲಕ ಜಾಗತಿಕವಾಗಿ ಹೂಡಿಕೆ ಸ್ನೇಹಿ ರಾಜ್ಯವಾಗಿ ಗುರುತಿಸಿಕೊಂಡಿದೆ. ಕರ್ನಾಟಕವು ಮೊದಲ ತ್ರೈಮಾಸಿಕದಲ್ಲಿ ಒಟ್ಟಾರೆ 2.2 ಬಿಲಿಯನ್ ಡಾಲರ್ ಹೂಡಿಕೆಗಳನ್ನು ಆಕರ್ಷಿಸಿದೆ, ಇದು ರಾಜ್ಯದ ಪ್ರಗತಿ ಶೀಲ ಆರ್ಥಿಕ ನೀತಿಗಳ ಬಗೆಗೆ ಹೂಡಿಕೆದಾರರ ನಂಬಿಕೆಯನ್ನು ಸೂಚಿಸುತ್ತದೆ.
ವಲಯವಾರು ಆರ್ಥಿಕ ಪ್ರಗತಿ: 2024-25ರ ಸಂಗ್ರಹ(ಅಕ್ಟೋಬರ್ ವರೆಗೆ) ವಾಣಿಜ್ಯ ತೆರಿಗೆ ಗುರಿ 1.10 ಲಕ್ಷ ರೂ.(ಗುರಿ),58,537 ಕೋಟಿ ರೂ.ಸಂಗ್ರಹ, ಅಬಕಾರಿ ಸುಂಕ 38,525ಕೋಟಿ ರೂ.(ಗುರಿ), 20,502ಕೋಟಿ ರೂ.ಸಂಗ್ರಹ, ನೋಂದಣಿ ಮತ್ತು ಮುದ್ರಾಂಕ26 ಸಾವಿರ ಕೋಟಿ ರೂ.(ಗುರಿ), 13,870 ಕೋಟಿ ರೂ.ಸಂಗ್ರಹ, ಮೋಟಾರು ವಾಹನ ತೆರಿಗೆ 13 ಸಾವಿರ ಕೋಟಿ ರೂ.(ಗುರಿ), 6,640 ಕೋಟಿ ರೂ.ಸಂಗ್ರಹ, ಗಣಿ ತೆರಿಗೆ 9 ಸಾವಿರ ಕೋಟಿ ರೂ.(ಗುರಿ), 4,138 ಕೋಟಿ ರೂ.ಸಂಗ್ರಹವಾಗಿದೆ.
ಕಾರ್ಯತಂತ್ರಗಳ ಸುಧಾರಣೆಗಳು: ನೋಂದಣಿ ಮತ್ತು ಮುದ್ರಾಂಕ ತೆರಿಗೆ, ಅಬಕಾರಿ ತೆರಿಗೆ ಮತ್ತು ಬಳಕೆದಾರರ ಶುಲ್ಕಗಳನ್ನು ಪರಿಷ್ಕರಣೆಗಳನ್ನು ಮಾಡುವ ಮೂಲಕ ಸರಕಾರವು ದಿಟ್ಟ ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದು ವರ್ಷಗಳ ವರೆಗೆ ಸ್ಥಿರವಾಗಿತ್ತು. ಹೆಚ್ಚುವರಿಯಾಗಿ, ಗಣಿ ವಿಭಾಗವು ದೀರ್ಘಾವಧಿಯ ಆಂತರಿಕ ಸವಾಲುಗಳನ್ನು ಹಿಮ್ಮೆಟ್ಟಿ ಹೊರಗೆ ಬಂದಿದ್ದು, ತೆರಿಗೆ ಸಂಗ್ರಹದ ಗುರಿ ತಲುಪುವಲ್ಲಿ ಸಹಕಾರಿಯಾಯಿತು.
ಅಧಿಕ ವೆಚ್ಚ ನಿಭಾಯಿಸುವ ಸಾಮರ್ಥ್ಯ: ಕಾರ್ಯಾಂಗದ ಕ್ಷಮತೆ ವೃದ್ಧಿಯಿಂದಾಗಿ ಬಜೆಟ್ ಅನುದಾನ ಬಳಕೆಯಲ್ಲಿ ಮುನ್ನಡೆ ಸಾಧಿಸಿದ್ದೇವೆ. ಅಕ್ಟೋಬರ್ 2024ರ ಅವಧಿಗೆ ಈಗಾಗಲೇ ಬಜೆಟ್‍ನ ಅಂದಾಜು ಮೊತ್ತದ ಶೇ.46ರಷ್ಟು ಬಳಕೆಯಾಗಿದೆ, ಕಳೆದ ಹಣಕಾಸು ವರ್ಷ ಈ ಪ್ರಮಾಣ ಶೇ.42ರಷ್ಟು ಇತ್ತು. ಬಜೆಟ್ ಅಂದಾಜಿನಲ್ಲಿ ನಮೂದಿಸಿದ್ದ ಬಂಡವಾಳ ವೆಚ್ಚಕ್ಕಿಂತ ಶೇ.29ರಷ್ಟು ಹೆಚ್ಚಾಗಿದೆ, ಕಳೆದ ವರ್ಷ ಈ ಪ್ರಮಾಣವು ಶೇ.24ರಷ್ಟು ಇತ್ತು. ಇದು ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಸರಕಾರದ ಬದ್ಧತೆಯನ್ನು ತೋರಿಸುತ್ತದೆ.
ಗ್ಯಾರಂಟಿ ಯೋಜನೆಗಳಿಗೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹಣ: 52,009 ಕೋಟಿರೂ.ಗಳ ಬಜೆಟ್ ಮೊತ್ತದಲ್ಲಿ 24,235 ಕೋಟಿರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡುವ ಮೂಲಕ ಸರಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವ ವಿಚಾರವಾಗಿ ಟೀಕಾಕಾರರ ಬಾಯಿ ಮುಚ್ಚಿಸಿದೆ. ಇ-ಆಡಳಿತ ಮಾದರಿಗಳ ಪರಿಣಾಮಕಾರಿ ಬಳಕೆಯಿಂದ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ಮೂಲಕ ಹಾಗೂ ಅಸಮರ್ಥತೆಯನ್ನು ನಿವಾರಿಸುವ ಮೂಲಕ ಕಲ್ಯಾಣ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಹಕಾರಿಯಾಗಿವೆ.
ಮೂಲಸೌಕರ್ಯ ಹೂಡಿಕೆಗಳಿಂದ ದೀರ್ಘ ಕಾಲಿಕ ಬೆಳವಣಿಗೆ: ಕರ್ನಾಟಕದ ಆರ್ಥಿಕ ಬೆಳವಣಿಗೆಯ ದರವನ್ನು (ಜಿಎಸ್‍ಡಿಪಿ) ಶೇ.14ಕ್ಕೆ ತಲುಪಿಸಲು ಈ ಹಣಕಾಸು ವರ್ಷದಲ್ಲಿ ಜಿಎಸ್‍ಡಿಪಿಯ ಶೇ.2ಕ್ಕಿಂತ ಮೇಲೆಯೇ ಬಂಡವಾಳ ವೆಚ್ಚವನ್ನು ನಿರ್ವಹಿಸಲು ಸರಕಾರ ಉದ್ದೇಶಿಸಿದೆ.
ಸರಕಾರವು ತನ್ನ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತ ಗೊಳಿಸಲು ವಿಶ್ವಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮುಂತಾದ ವಿವಿಧ ವಿದೇಶಿ ವಾಣಿಜ್ಯ ಸಂಸ್ಥೆಗಳೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ. ಅಂತರ್ ರಾಷ್ಟ್ರೀಯ ಹಣಕಾಸು ಸಂಸ್ಥೆಗಳೊಂದಿಗೆ 16,750 ಕೋಟಿ ರೂ.ಹೂಡಿಕೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ.
ಇದರಲ್ಲಿ, ಬೆಂಗಳೂರುನಲ್ಲಿ ವಿಪತ್ತು ನಿಯಂತ್ರಣ ಯೋಜನೆಗಳು-3,500 ಕೋಟಿ ರೂ., ಕರಾವಳಿ ಕರ್ನಾಟಕದಲ್ಲಿ ನೀಲಿ ಆರ್ಥಿಕತೆ ಪರಿವರ್ತನೆ-600 ಕೋಟಿ ರೂ., ನಗರ ಜಲಸರಬರಾಜು ಆಧುನೀಕರಣ-1,200 ಕೋಟಿ ರೂ., ಸರ್ವಋತು ಗ್ರಾಮೀಣ ರಸ್ತೆಗಳು (ಪ್ರಗತಿಪಥ)-3,600 ಕೋಟಿ ರೂ., ರಾಜ್ಯ ಹೆದ್ದಾರಿಗಳ ಸುಧಾರಣೆ–3,650 ಕೋಟಿ ರೂ., ನೀರಾವರಿ-500 ಕೋಟಿ ರೂ., ಸಾರ್ವಜನಿಕ ಶಾಲಾ ಮೂಲಸೌಕರ್ಯ ಅಭಿವೃದ್ಧಿ– 2,800 ಕೋಟಿ ರೂ., ಸಾರ್ವಜನಿಕ ಸಾರಿಗೆಗಾಗಿ ಎಲೆಕ್ಟ್ರಿಕ್ ಬಸ್ಸುಗಳು–1,400 ಕೋಟಿ ರೂ.ಗಳು ಸೇರಿವೆ.
ಬೆಂಗಳೂರು ನಗರದ ಮೂಲ ಸೌಕರ್ಯ 1,13,500 ಕೋಟಿ ರೂ.ಮೌಲ್ಯದ ಯೋಜನೆಗಳೊಂದಿಗೆ ಪರಿವರ್ತನೆಯತ್ತ ಹೋಗುತ್ತಿದೆ. ಈ ಹೂಡಿಕೆಗಳು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು, ಹೆಚ್ಚಿನ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಆಕರ್ಷಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಬೆಂಗಳೂರನ್ನು ಜಾಗತಿಕ ವಹಿವಾಟು ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ಮಾಡಲು ರೂಪಿಸಲಾಗಿದೆ.
ಕೈಗೆತ್ತಿಕೊಳ್ಳಲಿರುವ ಯೋಜನೆಗಳು: 100 ಕಿಮೀ ಎಲಿವೇಟೆಡ್ ಮಾರ್ಗ—12 ಸಾವಿರ ಕೋಟಿ ರೂ., ಡಬಲ್ ಡೆಕ್ಕರ್ ಮೆಟ್ರೋ ಲೈನ್‍ಗಳು—9 ಸಾವಿರ ಕೋಟಿ ರೂ., ಹಂತ -3 ಮತ್ತು 3ಎ ಅಡಿಯಲ್ಲಿ 80 ಕಿಮೀ ಹೆಚ್ಚುವರಿ ಮೆಟ್ರೋ—40 ಸಾವಿರ ಕೋಟಿ ರೂ., ಭಾರತದ ಅತಿ ಉದ್ದದ 40 ಕಿಮೀ ಸುರಂಗ ಮಾರ್ಗ— 40 ಸಾವಿರ ಕೋಟಿ ರೂ., ಫೆರಿಫೆರಲ್ ರಸ್ತೆ ಜಾಲ ಅಭಿವೃದ್ಧಿ—3 ಸಾವಿರ ಕೋಟಿ ರೂ., ಸ್ಕೈ ಡೆಕ್ ಯೋಜನೆ—500 ಕೋಟಿ ರೂ. ಹಾಗೂ ಬೆಂಗಳೂರು ವಾಣಿಜ್ಯ ಕಾರಿಡಾರ್—27 ಸಾವಿರ ಕೋಟಿ ರೂ.ಗಳು.
ಅಭಿವೃದ್ಧಿಯ ಹೊಸ ಮಾದರಿ: ಕರ್ನಾಟಕದ ಆರ್ಥಿಕ ನಿರ್ವಹಣಾ ಕಾರ್ಯತಂತ್ರಗಳಿಂದ ಜನ ಕಲ್ಯಾಣ ಗ್ಯಾರಂಟಿ ಯೋಜನೆಗಳ ಬಂಡವಾಳ ಹೂಡಿಕೆಗೆ, ಅಭಿವೃದ್ಧಿಯ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಉದ್ದೇಶಿತ ಸುಧಾರಣೆಯ ಗುರಿಗಳು ಮತ್ತು ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆಗಳ ಮೂಲಕ ರಾಜ್ಯವು ಅಭಿವೃದ್ಧಿಯ ಹೊಸ ಮಾದರಿಯನ್ನು ನಿರ್ಮಿಸಿದ್ದು, ಇದು ಆರ್ಥಿಕ ನಿರ್ವಹಣೆ ಮತ್ತು ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ರಾಜ್ಯವನ್ನು ಮುಂಚೂಣಿಯಲ್ಲಿರಿಸಿದೆ.