ರಿದಂ ಕಿಂಗ್ ಖ್ಯಾತಿಯ ಮೃದಂಗ ವಾದಕ ಬಾಲಸುಬ್ರಹ್ಮಣ್ಯಂ ನಿಧನ
ಬೆಂಗಳೂರು : ಜನಪ್ರಿಯ ಮೃದಂಗ ವಾದಕ ಬಾಲಸುಬ್ರಹ್ಮಣ್ಯಂ (ಬಾಲಿ) ಇಂದು(ಗುರುವಾರ) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬಾಲಿ ಅವರಿಗೆ ಎಂಭತ್ತು ವರ್ಷ ವಯಸ್ಸಾಗಿತ್ತು. ಬಾಲಿ ಅವರ ನಿಧನಕ್ಕೆ ಕೆ.ಎಫ್.ಎಂ.ಎ(ಕರ್ನಾಟಕ ಫಿಲಂ ಮ್ಯುಸಿಷಿಯನ್ ಅಸೋಸಿಯೇಷನ್) ಸಂತಾಪ ವ್ಯಕ್ತಪಡಿಸಿದೆ.
"ಬಾಲಿ ಅವರು ನನ್ನಂತಹ ನೂರಾರು ಕಲಾವಿದರನ್ನು ಸಾಕಿ ಬೆಳಸಿದವರು. ಕಲೆಯನ್ನೇ ಉಸಿರಾಗಿ ಇಟ್ಟುಕೊಂಡಿದವರು. ಅವರ ಸಾವು ನನಗೆ ತುಂಬಾ ದುಃಖ ತಂದಿದೆ. ದೇವರು ಅವರಿಗೆ ಸದ್ಗತಿ ನೀಡಲಿ" ಎಂದು ಕೆ.ಎಫ್.ಎಂ.ಎ ಅಧ್ಯಕ್ಷರಾದ ಸಾಧುಕೋಕಿಲ ತಿಳಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಮೃದಂಗ ಕಲಿಕೆ ಆರಂಭಿಸಿದ್ದ ಬಾಲಿ ಅವರು ಡೋಲಕ್, ಮೃದಗಂ, ತಬಲಾ ವಾದ್ಯಗಳನ್ನು ನುಡಿಸುವಲ್ಲೂ ಪರಿಣಿತರಾಗಿದ್ದರು. ಡ್ರಮ್ಸ್, ಬ್ಯಾಂಗೋ, ಕಾಂಗೋಸ್ ಗಳಲ್ಲಿ ಕೂಡ ಅವರಿಗೆ ಅಸಾಧಾರಣ ಪರಿಣಿತಿ ಇತ್ತು. ಸುಗಮ ಸಂಗೀತದ ಹಿರಿಯ ಕಲಾವಿದರಾದ ಬಾಳಪ್ಪ ಹುಕ್ಕೇರಿ, ಪಿ.ಕಾಳಿಂಗ ರಾವ್, ಮೈಸೂರು ಅನಂತ ಸ್ವಾಮಿ, ಸಿ.ಅಶ್ವತ್ಥ್ ಮೊದಲಾದವರ ಸಂಯೋಜನೆಯ ವಾದ್ಯಗೋಷ್ಟಿಗಳನ್ನು ಅವರು ನಿರ್ವಹಿಸಿದ್ದರು.