ಶ್ರೀರಾಮಸೇನೆ ಕಾರ್ಯಕರ್ತರಿಗೆ ಬಂದೂಕು ತರಬೇತಿ | ಮಾಹಿತಿ ತಿಳಿದುಕೊಂಡು ಪ್ರತಿಕ್ರಿಯಿಸುವೆ : ಐಜಿಪಿ ಚೇತನ್ ಸಿಂಗ್ ರಾಥೋಡ್
ಬೆಂಗಳೂರು : ‘ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಶ್ರೀರಾಮಸೇನೆಯು ತನ್ನ ಕಾರ್ಯಕರ್ತರಿಗೆ ಬಂದೂಕು ಮತ್ತು ಯುದ್ಧಕಲೆ ತರಬೇತಿ ನೀಡಿರುವ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಪರಿಶೀಲಿಸಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಬೆಳಗಾವಿ ವಿಭಾಗದ ಐಜಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಶನಿವಾರ ವಾರ್ತಾಭಾರತಿ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ‘ನಾನು ಈ ಕುರಿತು ಪರಿಶೀಲನೆ ನಡೆಸದೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಆದುದರಿಂದ ಮಾಹಿತಿ ತಿಳಿದುಕೊಂಡ ಬಳಿಕ ಸೂಕ್ತ ಉತ್ತರ ನೀಡುತ್ತೇನೆ. ಮಾಹಿತಿಯನ್ನು ಪಡೆದುಕೊಳ್ಳದೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲʼ ಎಂದು ಸ್ಪಷ್ಟಣೆ ನೀಡಿದರು.
ಘಟನೆಯ ವಿವರ :
ಶ್ರೀರಾಮಸೇನೆಯು ತನ್ನ ಕಾರ್ಯಕರ್ತರಿಗೆ ಆರು ದಿನಗಳ ಕಾಲ ಬಂದೂಕು ಮತ್ತು ಯುದ್ಧಕಲೆ ತರಬೇತಿ ನೀಡಿರುವ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಎಂಬ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ವ್ಯಕ್ತಿತ್ವ ವಿಕಸನ ಹಾಗೂ ಸ್ವಸುರಕ್ಷೆಗಾಗಿ ವಿವಿಧ ಶಾರೀರಿಕ ರಕ್ಷಾ ತರಬೇತಿ ಎಂಬ ಹೆಸರಿನಲ್ಲಿ ಬಂದೂಕು ತರಬೇತಿ ನೀಡಲಾಗಿದೆ. ಸೇನಾ ತರಬೇತಿ ಮಾದರಿಯಲ್ಲಿ ತರಬೇತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ನಡೆದ ಶಿಬಿರದಲ್ಲಿ ದಂಡ ಪ್ರಯೋಗ, ಏರ್ ಗನ್ ಮೂಲಕ ಗನ್ ಟ್ರೈನಿಂಗ್, ಕರಾಟೆ, ಮುಳ್ಳುಗಂಟಿಯ ಗುಂಡಿಯಲ್ಲಿ ಹಾದುಹೋಗುವುದು, ಸಂದಿಗ್ಧ ಸ್ಥಳಗಳಲ್ಲಿ ಪಾರಾಗುವುದು, ಬಂದೂಕು ಬಳಕೆ, ಟಾರ್ಗೆಟ್ ಸೆಟ್ ಮಾಡಿ ಗುರಿ ಇಟ್ಟು ಹೊಡೆಯುವ ತರಬೇತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಶ್ರೀರಾಮ ಸೇನೆಯು ಈ ರೀತಿ ರಾಜ್ಯಾದ್ಯಂತ 186 ಮಂದಿ ತನ್ನ ಕಾರ್ಯಕರ್ತರಿಗೆ ತರಬೇತಿ ನೀಡಿದೆ ಎಂದು ಹೇಳಲಾಗುತ್ತಿದೆ.