ಬಸ್ ಪ್ರಯಾಣ ದರದಲ್ಲಿ ಶೇ.15ರಷ್ಟು ಹೆಚ್ಚಳ ; ನಾಳೆಯಿಂದಲೇ ಪರಿಷ್ಕೃತ ದರ ಜಾರಿ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲು ರಾಜ್ಯ ಸರಕಾರವು ಅನುಮೋದನೆ ನೀಡಿದ್ದು, ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.
ಬಿಎಂಟಿಸಿಯು 2015ರಲ್ಲಿ ಶೇ.17ರಷ್ಟು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳು 2020ರಲ್ಲಿ ಶೇ.12ರಷ್ಟು ಪ್ರಯಾಣದ ದರ ಪರಿಷ್ಕರಣೆ ಮಾಡಿತ್ತು. ಪ್ರಯಾಣ ದರ ಪರಿಷ್ಕರಣೆಗಾಗಿ ನಿಗಮದ ಸಿಬ್ಬಂದಿ ವೇತನ ವೆಚ್ಚ, ಇಂಧನ ವೆಚ್ಚ ಹಾಗೂ ನಿರ್ವಹಣಾ ವೆಚ್ಚವನ್ನು ಪರಿಗಣಿಸಲಾಗುತ್ತಿದೆ.
ಪ್ರಸ್ತುತ 9.56 ಕೋಟಿ ರೂ.ಮೊತ್ತವನ್ನು ಹೆಚ್ಚುವರಿಯಾಗಿ ವೆಚ್ಚ ಮಾಡುತ್ತಿದ್ದು, ಸಿಬ್ಬಂದಿ ವೆಚ್ಚ ಸೇರಿ ವಾರ್ಷಿಕವಾಗಿ 3,650 ಕೋಟಿ ರೂ.ನಿಗಮಕ್ಕೆ ಹೊರೆಯಾಗುತ್ತಿದೆ. ಆದುದರಿಂದ ಶೇ.15ರಷ್ಟು ಪ್ರಯಾಣದ ದರ ಹೆಚ್ಚಳ ಮಾಡಲು ನಿಗಮಗಳು ಪ್ರಸ್ತಾವ ಸಲ್ಲಿಸಲಾಗಿತ್ತು ಎಂದು ತಿಳಿಸಲಾಗಿದೆ.
ನಾಲ್ಕು ನಿಗಮಗಳು ಸುಮಾರು 1,01,648 ಸಿಬ್ಬಂದಿಗಳನ್ನು ಹೊಂದಿದ್ದು, ಆಯಾ ನಿಗಮಗಳು ಸಿಬ್ಬಂದಿ ಸಂಬಳ ಮತ್ತು ಎಲ್ಲ ಭತ್ಯೆಗಳನ್ನು ನಿಗಮಗಳ ಆದಾಯದ ಮೂಲಕ ಮಾತ್ರ ಪಾವತಿಸುತ್ತಿವೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ 2024-25ನೆ ಆರ್ಥಿಕ ವರ್ಷದ ಒಟ್ಟು ಆದಾಯ 8418.46 ಕೋಟಿ ರೂ.ಗಳಾಗಿದ್ದು, ನಾಲ್ಕು ಸಾರಿಗೆ ಸಂಸ್ಥೆಗಳು ಒಟ್ಟು 9511.41 ಕೋಟಿ ರೂ.ಗಳ ವೆಚ್ಚವನ್ನು ಮಾಡಿರುತ್ತವೆ. ಪ್ರಸ್ತುತ 2024-25ನೆ ಆರ್ಥಿಕ ವರ್ಷದಲ್ಲಿ(ನವೆಂಬರ್ ವರೆಗೆ) ನಿವ್ವಳ ಕೊರತೆಯು 1092.95 ಕೋಟಿ ರೂ.ಗಳಷ್ಟಿರುತ್ತದೆ ಎಂದು ಪ್ರಸ್ತಾವದಲ್ಲಿ ತಿಳಿಸಿತ್ತು.
ಸಾರಿಗೆ ನಿಗಮಗಳಿಂದ ಆಚರಣೆ ಮಾಡುತ್ತಿರುವ ವಿವಿಧ ಮಾದರಿಯ ಬಸ್‍ಗಳಿಗೆ ಪ್ರತಿ ಕಿ.ಮೀ.ಗೆ ವಿಧಿಸುತ್ತಿರುವ ದರಗಳನ್ನು ನೆರೆ ರಾಜ್ಯಗಳಿಗೆ ಹೋಲಿಸಿದಲ್ಲಿ ನಮ್ಮ ರಾಜ್ಯದ ನಿಗಮಗಳ ಪ್ರಯಾಣ ದರ ಕಡಿಮೆಯಿದೆ. ಈ ಎಲ್ಲ ಕಾರಣಗಳಿಂದ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಮುನ್ನಡೆಯಲು ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಹಾಗೂ ಹಮ್ಮಿಕೊಳ್ಳಲಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಪ್ರಯಾಣಿಕ ಬಸ್ ದರಗಳನ್ನು ಹೆಚ್ಚಿಸಲು ಅನುಮೋದನೆ ನೀಡಿದೆ.
ಎಲ್ಲಿಂದ-ಎಲ್ಲಿಗೆ-ಪ್ರಸ್ತುತ ಪ್ರಯಾಣ ದರ (ರೂ.ಗಳಲ್ಲಿ)- ಪರಿಷ್ಕೃತ ಪ್ರಯಾಣ ದರ (ರೂ.ಗಳಲ್ಲಿ)
ಬೆಂಗಳೂರು-ತುಮಕೂರು–80– 91
ಬೆಂಗಳೂರು–ಮಂಗಳೂರು– 398 – 454
ಬೆಂಗಳೂರು – ಉಡುಪಿ - 452 – 516
ಬೆಂಗಳೂರು- ದಾವಣಗೆರೆ – 320- 362
ಬೆಂಗಳೂರು – ಮೈಸೂರು – 141 – 162
ಬೆಂಗಳೂರು – ಕೋಲಾರ- 74- 85
ಬೆಂಗಳೂರು- ಕಲಬುರಗಿ- 706-805
ಬೆಂಗಳೂರು-ಬೀದರ್- 821-936
ಬೆಂಗಳೂರು- ರಾಯಚೂರು- 560-638
ಬೆಂಗಳೂರು-ಬೆಳಗಾವಿ - 617-697
ಬೆಂಗಳೂರು- ಧಾರವಾಡ-523- 591