ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ : ಪತ್ನಿ ನಿಖಿತಾ ಸೇರಿ ಕುಟುಂಬ ಸದಸ್ಯರಿಗೆ ಜಾಮೀನು
ಬೆಂಗಳೂರು : ದೇಶದಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕೊಳ್ಳಗಾಗಿದ್ದ ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್ ಸಿಂಘಾನಿಯಾಗೆ ಜಾಮೀನು ಮಂಜೂರು ಮಾಡಿ ಸಿಟಿ ಸಿವಿಲ್ ಕೋರ್ಟ್ ಶನಿವಾರ ಆದೇಶ ಹೊರಡಿಸಿದೆ.
ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಆದೇಶದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಮೂವರಿಗೂ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ಪತ್ನಿ ಹಾಗೂ ಅವರ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಸುದೀರ್ಘ ಡೆತ್ ನೋಟ್ ಬರೆದು ಡಿ.9ರಂದು ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೆ ಕೊಳಲಿನಲ್ಲಿದ್ದ ಮನೆಯಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಮೊಬೈಲ್ನಲ್ಲಿ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣವು ರಾಷ್ಟ್ರದೆಲ್ಲೆಡೆ ಚರ್ಚೆಗೆ ಕಾರಣವಾಗಿತ್ತು.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ 108ರ ಆತ್ಮಹತ್ಯೆ ಪ್ರಚೋದನೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಡಿ.20ರಂದು ನಿಖಿತಾಳನ್ನು ಹರಿಯಾಣದ ಗುರುಗ್ರಾಮ ಹಾಗೂ ತಾಯಿ ಹಾಗೂ ಸಹೋದರರನ್ನು ಉತ್ತರಪ್ರದೇಶದ ಪ್ರಯಾಗ್ರಾಜ್ನ ಹೋಟೆಲ್ವೊಂದರಲ್ಲಿ ಬಂಧಿಸಿದ್ದರು.