ಹಿರಿಯ ಸಾಹಿತಿ ಡಾ. ನಾ ಡಿಸೋಜ ನಿಧನ
ಸಾಗರ : ನಾಡಿನ ಹಿರಿಯ ಸಾಹಿತಿ ಡಾ.ನಾ ಡಿಸೋಜ (87) ಅವರು ವಯೋಸಹಜ ಅನಾರೋಗ್ಯದಿಂದ ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1964ರಲ್ಲಿ ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟಗೊಂಡಿತು. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಗಾಂಧಿ ಬಂದರು, ದ್ವೀಪ, ಜೀವಕಳೆ, ಚೆನ್ನೈ, ಚೆನ್ನಮ್ಮ, ಚೆನ್ನಮ್ಮಾಜಿ ಹೀಗೆ 40ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ.
ಮುಳುಗಡೆ, ಕೊಳಗ, ಒಳಿತನ್ನು ಮಾಡಲು ಬಂದವರು, ಬಣ್ಣ, ಪಾದರಿಯಾಗುವ ಹುಡುಗ, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ಕುವೆಂಪು ವಿಶ್ವ ವಿದ್ಯಾನಿಲಯ, ಬೆಂಗಳೂರು ವಿವಿ, ಮಂಗಳೂರು ವಿವಿ ಮತ್ತು ಧಾರವಾಡದ ಕರ್ನಾಟಕ ವಿವಿಯ ಪಠ್ಯಪುಸ್ತಕಗಳಾಗಿಯೂ ಆಯ್ಕೆಯಾಗಿದೆ.
ನಾ.ಡಿಸೋಜ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ, ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗುಲ್ವಾಡಿ ವೆಂಕಟರಾವ ಪ್ರಶಸ್ತಿ, ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ್ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ಸಂದೇಶ ಪ್ರಶಸ್ತಿ, ಹೊಸದಿಲ್ಲಿ ಕಳಾ ಪ್ರಶಸ್ತಿ, ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ, ಆಳ್ವಾಸ್ ನುಡಿಸಿರಿ, ವರ್ಧಮಾನ ಪ್ರಶಸ್ತಿ, ಕುವೆಂಪು ವಿಶ್ವ ವಿದ್ಯಾನಿಲಯದ ಗೌರವ ಡಾಕ್ಟರೇಟ್, ಚಿತ್ರದುರ್ಗದ ಬೃಹನ್ಮಠದ ಡಾ. ಶಿವಮೂರ್ತಿ ಮುರುಘ ಶರಣ ಪ್ರಶಸ್ತಿ, ಮಾಸ್ತಿ ಪ್ರಶಸ್ತಿಗಳು ಲಭಿಸಿದೆ. ಜೊತೆಗೆ ಭಟ್ಕಳ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಮುಂಬೈಯ ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ, ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದರು.
ಜನವರಿ ಬೆಳಗ್ಗೆ 10ರಿಂದ 3 ಗಂಟೆಯವರೆಗೆ ಸಾಗರದ ಗಾಂಧಿ ಮೈದಾನದಲ್ಲಿ ನಾ ಡಿಸೋಜ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. 4 ಗಂಟೆಗೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.