ಮಾ.1ರಿಂದ 8ರ ವರೆಗೆ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾ.1 ರಿಂದ 8ರ ವರೆಗೆ ನಡೆಯಲಿದೆ. ಕಳೆದ ವರ್ಷ ‘ಸಾಮಾಜಿಕ ನ್ಯಾಯ’ದ ಧ್ಯೇಯವನ್ನು ಇರಿಸಿಕೊಳ್ಳಲಾಗಿತ್ತು. ಈ ಬಾರಿ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯವನ್ನು ಇರಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ 16ನೇ ಬೆಂಗಳೂರು ಅಂತರ್‍ರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಚಲನಚಿತ್ರೋತ್ಸವದಲ್ಲಿ ಸುಮಾರು 60 ದೇಶಗಳ 200ಕ್ಕೂ ಹೆಚ್ಚು ಚಲನಚಿತ್ರಗಳು, 13 ಚಲನಚಿತ್ರ ಮಂದಿರಗಳಲ್ಲಿ 400 ಪ್ರದರ್ಶನ ಆಗಲಿವೆ. ರಾಜ್ಯದ ಜನತೆಗೆ, ವಿಶೇಷವಾಗಿ ಬೆಂಗಳೂರಿನ ನಾಗರಿಕರಿಗೆ ಬೇರೆ ಬೇರೆ ದೇಶದ, ಬೇರೆ ಬೇರೆ ಭಾಷೆಯ ಚಲನಚಿತ್ರಗಳನ್ನು ನೋಡುವ ಸುವರ್ಣ ಅವಕಾಶ ಇದಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
2006ರಿಂದಲೂ ಬೆಂಗಳೂರು ಅಂತರ್‍ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರತಿ ವರ್ಷ ನಡೆದುಕೊಂಡು ಬಂದಿದೆ. ಕಳೆದ ವರ್ಷ ಚಲನಚಿತ್ರೋತ್ಸವಕ್ಕಾಗಿ 7 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು. ಈ ಬಾರಿ 9 ಕೋಟಿ ರೂ.ಖರ್ಚು ಮಾಡಲು ಸಂಘಟನಾ ಸಮಿತಿ ತೀರ್ಮಾನ ಮಾಡಿದೆ. ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿ ಹಾಗೂ ರಾಯಭಾರಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಂಘಟನಾ ಸಮಿತಿಗೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಚಲನಚಿತ್ರೋತ್ಸವದ ಉದ್ಘಾಟನೆಯನ್ನು ನಾನು ನೆರವೇರಿಸುತ್ತೇನೆ. ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲರು ಭಾಗವಹಿಸಲಿದ್ದಾರೆ. ಫೆ.27ರಂದು ಚಲನಚಿತ್ರೋತ್ಸವ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಬಜೆಟ್ ಪೂರ್ವ ಸಭೆಗಳು ಇರುವುದರಿಂದ, ಮಾ.1ಕ್ಕೆ ಉದ್ಘಾಟನಾ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಕನ್ನಡ ಚಲನಚಿತ್ರಗಳು ಈ ಉತ್ಸವದಲ್ಲಿ ಪ್ರದರ್ಶನ ಆಗುತ್ತವೆ ಎಂದು ಮುಖ್ಯಮಂತ್ರಿ ಹೇಳಿದರು.
ಮೈಸೂರಿನಲ್ಲಿ ಚಿತ್ರನಗರಿ: ಮೈಸೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 110 ಎಕರೆ ವಿಸ್ತೀರ್ಣದಲ್ಲಿ ಚಿತ್ರ ನಗರಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ, ಭೂಮಿಯನ್ನು ಹಸ್ತಾಂತರ ಮಾಡಲಾಗಿದೆ. ರಾಜ್ಯ ಚಲನಚಿತ್ರ ಅಕಾಡಮಿಗೆ ಸದಸ್ಯರನ್ನು ಶೀಘ್ರವೆ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸಾಧು ಕೋಕಿಲ, ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕಲಾವಿದರಾದ ಭಾವನಾ ರಾಮಣ್ಣ, ಡಾಲಿ ಧನಂಜಯ, ನೀನಾಸಂ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.