ʼಖಾತಾ ಇಲ್ಲದ ಆಸ್ತಿಗಳ ನೋಂದಣಿಗೆ ಕಡಿವಾಣ ಹಾಕಿʼ : ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ

Update: 2025-01-06 15:57 GMT

ಸಿದ್ದರಾಮಯ್ಯ 

ಬೆಂಗಳೂರು : ಸ್ಥಳೀಯ ಸಂಸ್ಥೆಗಳು ಖಾತಾ ನೀಡಿರುವ ಆಸ್ತಿಗಳನ್ನು ಮಾತ್ರ ನೋಂದಣಿ ಇಲಾಖೆಯಡಿ ನೋಂದಣಿ ಮಾಡಬೇಕು. ಸ್ಥಳೀಯ ಸಂಸ್ಥೆಗಳು ನೀಡಿರುವ ಖಾತಾ ದಾಖಲೆಗಳ ಡಾಟಾಬೇಸ್ ಕಂಪ್ಯೂಟರ್ ನಲ್ಲಿ ಇರಬೇಕು. ಈ ಡಾಟಾ ಬೇಸ್ ಆಧರಿಸಿ ನೋಂದಣಿ ಪ್ರಕ್ರಿಯೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಭೆ ನಡೆಸಿದ ಅವರು, ಬಿಬಿಎಂಪಿಯಲ್ಲಿ ಸುಮಾರು 7 ರಿಂದ 15 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿಲ್ಲ. ಇದರಿಂದ ತೆರಿಗೆಯೂ ಕಟ್ಟದ ಕಾರಣ ಸಾವಿರಾರು ಕೋಟಿ ರೂ.ಸರಕಾರಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಅಂದಾಜು 30 ಲಕ್ಷ ಆಸ್ತಿಗಳು, ಗ್ರಾಮ ಪಂಚಾಯತ್‍ಗಳಲ್ಲಿ ಅಂದಾಜು 90 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿಲ್ಲ. ಖಾತಾಯಿಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ನೋಂದಣಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ ನೀಡುವ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಬಿಬಿಎಂಪಿಯಲ್ಲಿ ವ್ಯಾಪ್ತಿಯಲ್ಲಿ ಖಾತಾ ನೀಡಿರುವುದನ್ನು ಡಾಟಾ ಬೇಸ್‍ನಲ್ಲಿ ಹಾಕಬೇಕು. ಇದರಿಂದ ಖಾತೆ ಆದ ಆಸ್ತಿಗಳನ್ನು ಮಾತ್ರ ನೋಂದಣಿ ಮಾಡಬಹುದು. ಕಾಗದ ದಾಖಲೆಗಳ ಆಧಾರದಲ್ಲಿ ಯಾವುದೇ ಕಾರಣಕ್ಕೂ ನೋಂದಣಿಗೆ ಪರಿಗಣಿಸಬಾರದು ಎಂದು ಅವರು ಸೂಚಿಸಿದರು.

ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿಯಾನದ ಮಾದರಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ನಡೆಸಲು ಸೂಚನೆ ನೀಡಿದ ಮುಖ್ಯಮಂತ್ರಿ, ಫೆ.10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 23 ಲಕ್ಷ ಆಸ್ತಿಗಳ ಡಿಜಿಟೈಸ್ ಮಾಡಲಾಗಿದೆ. ಈಗಾಗಲೇ 15 ಲಕ್ಷ ಖಾತಾ ಗಳನ್ನು ಡೌನ್‍ಲೋಡ್ ಮಾಡಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕ್ರಮಬದ್ಧವಲ್ಲದ ಸ್ವತ್ತುಗಳ ನಕಲಿ ಖಾತಾ ಗಳನ್ನು ಸೃಜಿಸಿ ವಂಚನೆಯಿಂದ ಹೆಚ್ಚು ದಸ್ತಾವೇಜುಗಳ ನೋಂದಣಿ ಮಾಡುವ ಪ್ರಕ್ರಿಯೆಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಇರುವ ಅಂತಹ ಬಡಾವಣೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ನಿವೇಶನಗಳಲ್ಲಿರುವ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳಾಗಿ ಪರಿಗಣಿಸುವ ಕುರಿತು ಪರಿಶೀಲಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಕಂದಾಯ ಇಲಾಖೆಯಲ್ಲಿ ಸರ್ವೇ ನಂಬರ್‍ಗಳಲ್ಲಿ ನಿರ್ಮಿಸಿದ ಅನಧಿಕೃತ ಬಡಾವಣೆಗಳು, ನಿವೇಶನಗಳ ದತ್ತಾಂಶ ಮಾಹಿತಿ ಇದ್ದು, ಸದರಿ ಮಾಹಿತಿಯನ್ನು ಆಧರಿಸಿ ಒಂದೇ ಯೋಜನೆಯಲ್ಲಿ ಸದರಿ ಸ್ವತ್ತುಗಳಿಗೆ ಖಾತಾ ದಾಖಲೆಗಳನ್ನು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಗ್ರಾಮ ಪಂಚಾಯತ್‍ಗಳಲ್ಲಿ 44 ಲಕ್ಷ ಆಸ್ತಿಗಳಿಗೆ ಮಾತ್ರ ಖಾತಾಯಿದೆ. ಇದರಿಂದ 800 ಕೋಟಿ ರೂ. ಆದಾಯ ಪ್ರತಿ ವರ್ಷ ಬರುತ್ತಿದೆ. ಆದರೆ ಸುಮಾರು 96 ಲಕ್ಷ ಆಸ್ತಿಗಳಿಗೆ ಇನ್ನೂ ಈ ಖಾತಾ ಇರುವುದಿಲ್ಲ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖಾತೆ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ತಿಳಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕಂದಾಯ ಇಲಾಖೆಯ ಪ್ರಧಾನ ರಶ್ಮಿ ವಿ.ಮಹೇಶ್, ನೋಂದಣಿ ಮತ್ತು ಮುಂದ್ರಾಂಕ ಇಲಾಖೆಯ ಮಹಾ ನಿರೀಕ್ಷಕ ಕೆ.ಎ.ದಯಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಇನ್ನಷ್ಟು ಸರಳೀಕರಣಗೊಳಿಸಲು ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ವರ್ಷ ಡಿಸೆಂಬರ್ ಕೊನೆಗೆ ರೂ.16,993 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17ರಷ್ಟು ಹೆಚ್ಚುವರಿ ಪ್ರಗತಿ ಸಾಧಿಸಲಾಗಿದೆ’

-ಕೃಷ್ಣ ಬೈರೇಗೌಡ, ಕಂದಾಯ ಸಚಿವ

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News