ಬಸ್ ಪ್ರಯಾಣ ದರ ಏರಿಕೆಗೂ ಗ್ಯಾರಂಟಿಗಳಿಗೂ ಸಂಬಂಧವಿಲ್ಲ : ಚಲುವರಾಯಸ್ವಾಮಿ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡಿ 10 ವರ್ಷಗಳಾಗಿವೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿಯೇ ಬಸ್ ಪ್ರಯಾಣ ದರ ಕಡಿಮೆ ಇರುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿರುವ ರಾಜ್ಯ ಸರಕಾರದ ಕ್ರಮದ ಕುರಿತು ಶನಿವಾರ ವಿಕಾಸಸೌಧದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಸ್ ಪ್ರಯಾಣ ದರ ಏರಿಕೆಗೂ ಗ್ಯಾರಂಟಿ ಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ 7ನೇ ವೇತನ ಆಯೋಗ ಜಾರಿಯಾಗಿರುವುದರಿಂದ ಸಾರಿಗೆ ನಿಗಮಗಳ ನೌಕರರಿಗೂ ವೇತನ ಹೆಚ್ಚಳವಾಗಿದೆ. ಡಿಸೇಲ್ ದರವು ಹೆಚ್ಚಳವಾಗಿದೆ. ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡದಿದ್ದರೆ ಸಂಸ್ಥೆಗಳನ್ನು ನಿರ್ವಹಣೆ ಮಾಡುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದರು.
ಕನಿಷ್ಠ ಎರಡು, ಮೂರು ವರ್ಷಗಳಿಗೊಮ್ಮೆ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡಿದರೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ. ಬಸ್ ಪ್ರಯಾಣ ದರ ಹೆಚ್ಚಳ ಮಾಡದೆ ಆರ್ಥಿಕ ಸವಾಲುಗಳನ್ನು ಎದುರಿಸುವುದು ಹೇಗೆ? ಸರಕಾರ ಒಂದು ಸಂಸ್ಥೆಗೆ ಎಷ್ಟು ಅಂತ ಸಹಾಯಧನ ಕೊಡಲು ಸಾಧ್ಯವಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಪೆಟ್ರೋಲ್, ಡಿಸೇಲ್, ಅಕ್ಕಿ, ಅಡುಗೆ ಎಣ್ಣೆ, ಬಟ್ಟೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾದರೂ ಖರೀದಿಸುತ್ತೀರಾ. ಮಾಂಸ 100 ರೂ.ಇದ್ದದ್ದು ಇವತ್ತು 500 ರೂ. ಆದರೂ ತೆಗೆದುಕೊಳ್ಳುತ್ತೀರಾ. ಬಸ್ ಪ್ರಯಾಣ ದರ ಏರಿಕೆ ಮಾಡಿದರೆ ಹೆಚ್ಚಳ ಅಂತೀರಾ ಏನು ಮಾಡೋದು ಎಂದು ಅವರು ತಿಳಿಸಿದರು.
ಸಂಕ್ರಾಂತಿ ಹಬ್ಬದ ಬಳಿಕ ರಾಜ್ಯ ಸರಕಾರ ಇರುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಪ್ರತಿಬಾರಿ ದೇವೇಗೌಡರು ಈ ಸರಕಾರ ಇರುವುದಿlಲ್ಲ ಎಂದು ಹೇಳುತ್ತಿದ್ದರು. ಈಗ ಅಪ್ಪನ ಚಾಳಿ ಮಗನಿಗೂ ಬಂದಿದೆ ಎಂದು ತಿರುಗೇಟು ನೀಡಿದರು.
ರಾಜ್ಯ ಸರಕಾರದ ಭವಿಷ್ಯವನ್ನು ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರಾ? ಅದೇನಿದ್ದರೂ ಜನತೆಯ ತೀರ್ಮಾನ. ಕುಮಾರಸ್ವಾಮಿ ಕೊಡುವ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ. ನಮಗೆ ಜನ ಕೊಟ್ಟಿರುವ ಸರ್ಟಿಫಿಕೇಟ್ ಮುಖ್ಯ. ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತದಾರರು ವಿರೋಧ ಪಕ್ಷಗಳ ಎಲ್ಲ ಆರೋಪಗಳಿಗೂ ಉತ್ತರ ನೀಡಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.