ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ | ಸಿಎಂಗೆ ವರದಿ ಸಲ್ಲಿಸಿದ ಮಹಿಳಾ ಆಯೋಗ

Update: 2025-01-04 14:44 GMT

ಬೆಂಗಳೂರು : ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ನಡೆದಂತಹ ಬಾಣಂತಿಯರ ಸರಣಿ ಸಾವು ಪ್ರಕರಣಗಳು ಹಾಗೂ ಜಿಲ್ಲಾ ಪ್ರವಾಸಗಳಲ್ಲಿ ಕಂಡ ಎಲ್ಲ ಸಮಸ್ಯೆಗಳ ಕುರಿತು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಲಕ್ಷ್ಮೀ ಚೌಧರಿ ವರದಿ ಸಲ್ಲಿಸಿದ್ದಾರೆ.

ವರದಿಯಲ್ಲೇನಿದೆ?: ಸರಕಾರಿ ಆಸ್ಪತ್ರೆಗಳಲ್ಲಿ ಅಪರೇಷನ್ ಥಿಯೇಟರ್, ಐಸಿಯು, ವಾರ್ಡ್ ಮುಂತಾದವುಗಳ ಶುಚಿತ್ವ ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಶಸ್ತ್ರ ಚಿಕಿತ್ಸೆ, ರಕ್ತ ಪರೀಕ್ಷೆಗಳನ್ನು ಮಾಡುವಾಗ ಉಪಕರಣಗಳನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ದ್ರಾವಣಗಳನ್ನು ಬಳಸಲು ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು.

ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಶೌಚಾಲಯಗಳಲ್ಲಿ ಸ್ವಚ್ಛತೆ ಇರುವುದಿಲ್ಲ. ಹಲವು ಆಸ್ಪತ್ರೆಗಳಲ್ಲಿ ಶೌಚಾಲಯಗಳು ದುಸ್ಥಿತಿಯಲ್ಲಿಲ್ಲ. ಕೂಡಲೇ ಶೌಚಾಲಯಗಳ ಸ್ವಚ್ಛತೆ ಹಾಗೂ ದುಸ್ಥಿತಿ ಕುರಿತು ಗಮನ ಹರಿಸಬೇಕು. ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಟ್ಯಾಂಕ್‍ನಲ್ಲಿರುವ ನೀರಿನ ಮಾದರಿಯನ್ನು ಕಾಲಕಾಲಕ್ಕೆ ಪರೀಕ್ಷೆಗೊಳಪಡಿಸಬೇಕು.

ಗರ್ಭಿಣಿಯರಿಗೆ ಯಥೇಚ್ಛವಾಗಿ ನೀರು ಕುಡಿಯುವಂತೆ ಮಾಹಿತಿ ನೀಡುವುದು. ಪ್ರತಿ ಎರಡು ತಿಂಗಳಿಗೊಮ್ಮೆ ಮೂತ್ರ ಪರೀಕ್ಷೆಯನ್ನು ಕಡ್ಡಾಯ ಮಾಡಬೇಕು. ಗರ್ಭಿಣಿ ಸ್ತ್ರೀಯರಿಗೆ ಸರಕಾರದಿಂದ ಪೂರೈಸುತ್ತಿರುವ ಪೌಷ್ಠಿಕ ಆಹಾರಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಆಪಾದನೆಗಳು ಇವೆ. ಆದುದರಿಂದ, ಈ ಬಗ್ಗೆ ಕಟ್ಟುನಿಟ್ಟಿನ ನಿಗಾವಹಿಸಬೇಕು.

ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೆರಿಗೆ ಕೊಠಡಿಗಳು, ಐಸಿಯು, ವೆಂಟಿಲೇಟರ್‍ಗಳು ಇರುವಂತೆ ನೋಡಿಕೊಳ್ಳಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ಸ್ಕ್ಯಾನಿಂಗ್ ತಜ್ಞರು, ಸ್ತ್ರೀರೋಗ ತಜ್ಞರು, ರೇಡಿಯಾಲಜಿಸ್ಟ್ ಹಾಗೂ ಇತರೆ ಸಿಬ್ಬಂದಿಗಳ ಕೊರತೆ ಇರುವುದರಿಂದ, ರೋಗಿಗಳ ಅನುಪಾತಕ್ಕೆ ಅನುಸಾರವಾಗಿ ಆಸ್ಪತ್ರೆಗಳಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಲು ಕ್ರಮ ವಹಿಸಬೇಕು.

ಅಲ್ಲದೇ, ಪ್ರಮುಖವಾಗಿ ಮೃತಪಟ್ಟಿರುವ ಬಾಣಂತಿಯರ ಮಕ್ಕಳಿಗೆ ರಾಜ್ಯ ಸರಕಾರದ ವತಿಯಿಮದಲೇ ಉಚಿತವಾಗಿ ಶಿಕ್ಷಣ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು ಎಂದು ನಾಗಲಕ್ಷ್ಮೀ ಚೌಧರಿ ಸಲ್ಲಿಸಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News