ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್‌ನಲ್ಲಿಯೇ ಯುದ್ಧ ನಡೆಯುತ್ತಿದೆ : ವಿಜಯೇಂದ್ರ

Update: 2025-01-04 12:14 GMT

ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್‌ನಲ್ಲಿಯೇ ಯುದ್ಧ ನಡೆಯುತ್ತಿದೆ. ಇದೇ ಕಾರಣಕ್ಕೆ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಔತಣಕೂಟ ಆಯೋಜಿಸುವ ಮೂಲಕ ಸಿದ್ದರಾಮಯ್ಯ ರಾಜಕೀಯ ದಾಳ ಉರುಳಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.‌

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಿಂದ ಅಧಿಕಾರ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔತಣ ಕೂಟದ ನೆಪದಲ್ಲಿ ಕೆಲವು ಶಾಸಕರುಗಳನ್ನು ಮೆಚ್ಚಿಸಲು ಹೊರಟಿದ್ದಾರೆ. ಈ ಔತಣ ಕೂಟ ಕೂಡ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದೇಶಿ ಪ್ರವಾಸದಲ್ಲಿರುವಾಗ ನಡೆಯುತ್ತಿದೆ. ಈ ಔತಣ ಕೂಟ ಸಿದ್ದರಾಮಯ್ಯ ಅವರ ಕೃಪಾಪೋಷಿತವಾಗಿದ್ದು, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದು ಜಗಜ್ಜಾಹೀರಾಗಿದೆ. ಮುಖ್ಯಮಂತ್ರಿ ರಾಜಕೀಯ ದಾಳ ಉರುಳಿಸಲು ಮುನ್ನುಡಿಯಾಗಿ ಈ ಔತಣ ಕೂಟ ಆಯೋಜಿಸಿದ್ದಾರೆ. ಅವರಿಗೆ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡಲು ಇಷ್ಟವಿಲ್ಲ. ಅವರದೇ ಪಕ್ಷದವರಿಗೆ ಅವರು ಮುಂದುವರೆಯಲು ಇಷ್ಟವಿಲ್ಲ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ವಿರುದ್ಧವೇ ಯುದ್ಧ ಆರಂಭವಾಗಿದೆ ಎಂದರು.

ಸದ್ಯದಲ್ಲೇ ಎಲ್ಲವೂ ಸರಿ ಹೋಗಲಿದೆ :

ಬಿಜೆಪಿಯಲ್ಲೂ ನಿಮ್ಮ ವಿರುದ್ಧವೇ ಪ್ರತಿಧ್ವನಿ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಪಕ್ಷಗಳಲ್ಲಿ ಷಡ್ಯಂತ್ರ, ಪಿತೂರಿಗಳೆಲ್ಲವೂ ಸಹಜ, ಎಲ್ಲವನ್ನು ಜೀರ್ಣಿಸಿಕೊಂಡು ಪಕ್ಷ ಸಂಘಟನೆ ಮಾಡುವ ಶಕ್ತಿಯನ್ನು ಭಗವಂತ ನನಗೆ ಕೊಟ್ಟಿದಾನೆ. ಅದನ್ನು ಮಾಡುತ್ತೇನೆ ಎಂದರು.

ನನಗೆ ರಾಜ್ಯಾಧ್ಯಕ್ಷ ಸ್ಥಾನ ಅನಿರೀಕ್ಷಿತವಾಗಿ ಸಿಕ್ಕಿದೆ. ಪಕ್ಷದ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ಕೊಟ್ಟಿದೆ. ಆಡಳಿತ ಪಕ್ಷ ತುದಿಗಾಲಲ್ಲಿ ನಿಲ್ಲುವಂತೆ ಅದರ ಭ್ರಷ್ಟಾಚಾರ, ದುರಾಡಳಿತದ ವಿರುದ್ದ ಹೋರಾಟ ಮಾಡುತ್ತಿದ್ದೇನೆ. ಮುಂದೆಯೂ ಕೂಡ ಅಧ್ಯಕ್ಷನಾಗಿ ಪಕ್ಷವನ್ನು ಸದೃಢಗೊಳಿಸಿ ಅಧಿಕಾರಕ್ಕೆ ತಂದೇ ತರುತ್ತೇನೆ ಎಂದರು.

ಬಿಜೆಪಿಯಲ್ಲಿ ಒಂದಿಬ್ಬರ ಸಮಸ್ಯೆ ಇದೆ. ನಾನು ಹೈಕಮಾಂಡ್‌ಗೆ ಚಾಡಿ ಹೇಳಲು ಹೋಗಿರಲಿಲ್ಲ. ಪಕ್ಷದ ಅಧ್ಯಕ್ಷನಾಗಿ ಪಕ್ಷದೊಳಗಿನ ವಿದ್ಯಾಮಾನಗಳನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಎಲ್ಲವನ್ನೂ ಅವರು ಗಮನಿಸುತ್ತಿದ್ದಾರೆ. ಸದ್ಯದಲ್ಲೇ ಎಲ್ಲವೂ ಸರಿ ಹೋಗಲಿದೆ ಎಂದು ಯತ್ನಾಳ್ ಅವರ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಎಸ್.ದತ್ತಾತ್ರಿ, ಕೆ.ಬಿ.ಅಶೋಕ್‌ನಾಯ್ಕ್, ಮಾಲತೇಶ್, ಮೋಹನ್‌ರೆಡ್ಡಿ, ಗಾಯಿತ್ರಿ ಮಲ್ಲಪ್ಪ, ಮಧುರಾ ಶಿವಾನಂದ್, ಕೆ.ವಿ.ಅಣ್ಣಪ್ಪ, ಶಿವರಾಜ್, ಹರಿಕೃಷ್ಣ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News