ಶಿವಮೊಗ್ಗ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

Update: 2025-01-01 15:04 GMT

ಬಂಧಿತರು

ಶಿವಮೊಗ್ಗ: ಗುತ್ತಿಗೆದಾರರೊಬ್ಬರಿಗೆ ಹಣ ಮಂಜೂರು ಮಾಡಲು 1.20 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ  ಪೊಲೀಸರು ದಾಳಿ ನಡೆಸಿ, ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಭದ್ರಾವತಿ ತಾಲೂಕು ಗೋಂದಿಯ ಭದ್ರಾ ಬಲದಂಡೆ ನಾಲೆಯ ಸಿಲ್ಟ್‌ ತೆಗೆಯುವ ಕಾಮಗಾರಿಯು 2024ರ ಜನವರಿಯಲ್ಲಿ ಪೂರ್ಣಗೊಂಡಿತ್ತು. ಆದರೆ ಟೆಂಡರ್‌ ಹಣ 9.16 ಲಕ್ಷ ರೂ. ಗುತ್ತಿಗೆದಾರರಿಗೆ ಮಂಜೂರಾಗಿರಲಿಲ್ಲ. ಹಾಗಾಗಿ ಗುತ್ತಿಗೆದಾರ ವಿ.ರವಿ ಹಲವು ಬಾರಿ ಹಣ ಮಂಜೂರಾತಿಗಾಗಿ ಮನವಿ ಮಾಡಿದ್ದರು. ಈಚೆಗೆ ನೀರಾವರಿ ನಿಗಮದ ಸೆಕ್ಷನ್‌ ಆಫೀಸರ್‌ ಕೊಟ್ರಪ್ಪ ಬಿಲ್‌ ಮಂಜೂರಾಗಬೇಕಿದ್ದರೆ 1.20 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಸೆಕ್ಷನ್‌ ಆಫೀಸರ್‌ ಕೊಟ್ರಪ್ಪ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಗುತ್ತಿಗೆದಾರ ರವಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇವತ್ತು ಬಿಆರ್‌ಪಿ ವ್ಯಾಪ್ತಿಯ ಡಿ.ಬಿ.ಹಳ್ಳಿಯ ಕಚೇರಿಯಲ್ಲಿ ಗುತ್ತಿಗೆದಾರ ರವಿ ಅವರಿಂದ 1.20 ಲಕ್ಷ ರೂ. ಲಂಚದ ಹಣ ಪಡೆಯುತ್ತಿದ್ದ ಸಂದರ್ಭ ಸೆಕ್ಷನ್‌ ಆಫೀಸರ್‌ ಕೊಟ್ರಪ್ಪ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್‌ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ಕಚೇರಿಯ ಲೈಟ್‌ ಮಜದೂರ್‌ ಅರವಿಂದ್‌ ಎಂಬಾತನನ್ನು ಬಂಧಿಸಲಾಗಿದೆ.

ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಮಂಜುನಾಥ ಚೌದರಿ ಎಂ.ಹೆಚ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಎಸ್ ಸುರೇಶ್, ಪ್ರಕಾಶ್, ಸಿಬ್ಬಂದಿ ಯೋಗೇಶ್, ಟೀಕಪ್ಪ, ಸುರೇಂದ್ರ, ಮಂಜುನಾಥ್, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್, ದೇವರಾಜ್, ಪ್ರಕಾಶ್, ಆದರ್ಶ, ಪುಟ್ಟಮ್ಮ.ಎನ್, ಅಂಜಲಿ, ಗಂಗಾಧರ, ಪ್ರದೀಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News