ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ, ಸಾವಿನ ಭಾಗ್ಯವನ್ನೇ ನೀಡುತ್ತಿದೆ : ವಿಜಯೇಂದ್ರ
ಶಿವಮೊಗ್ಗ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ ಮತ್ತು ಸಾವಿನ ಭಾಗ್ಯವನ್ನೇ ನೀಡುತ್ತಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಾಜ್ಯದಲ್ಲಿ ಸಂಭವಿಸುತ್ತಿರುವ ಬಾಣಂತಿಯರು ಹಾಗೂ ಶಿಶುಗಳ ಮರಣ ಖಂಡಿಸಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಶಿವಮೊಗ್ಗದ ಚಂದ್ರಶೇಖರ್, ಕಾಂಗ್ರೆಸ್ ಶಾಸಕನ ಪುತ್ರನ ಕಿರುಕುಳದಿಂದ ಪಿಎಸ್‌ಐ ಪರಶುರಾಮ್, ಬೆಳಗಾವಿ ಸಚಿವರ ಪಿಎ ಕಿರುಕುಳದಿಂದ ಅಲ್ಲಿನ ತಹಶೀಲ್ದಾರ್ ಕಚೇರಿಯ ಎಸ್‌ಡಿಎ, ಗುಲ್ಬರ್ಗಾದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬಲಗೈ ಬಂಟನ ಕಿರುಕುಳದಿಂದ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದರ ಜೊತೆಗೆ ಬಾಣಂತಿಯರ ಸರಣಿ ಸಾವು ರಾಜ್ಯದಲ್ಲಿ ಸಂಭವಿಸಿದೆ. ಸರಕಾರದ ದಿವ್ಯ ನಿರ್ಲಕ್ಷದಿಂದಾಗಿ ಈ ಸಾವುಗಳು ಸಂಭವಿಸಿದೆ. ಇಷ್ಟಕ್ಕೂ ನಿಲ್ಲದೇ ಸಾವಿರಕ್ಕೂ ಅಧಿಕ ನವಜಾತ ಶಿಶುಗಳ ಸಾವು ಕೂಡ ಆಗಿದೆ. ಸರಕಾರದಲ್ಲಿ ಯಾರಿಗೂ ಕಿಂಚಿತ್ ಜವಾಬ್ದಾರಿ ಇಲ್ಲ. ಇದೊಂದು ಲಜ್ಜೆಗಟ್ಟ ಸರಕಾರ. ಈ ಪ್ರಮಾಣದ ಸಾವುಗಳನ್ನು ಹಿಂದಿನ ಯಾವುದೇ ಸರಕಾದಲ್ಲಿ ಜನರು ನೋಡಿರಲಿಲ್ಲ. ಈ ಸರಕಾರಕ್ಕೆ ಕಂದಮ್ಮಗಳ ಹಾಗೂ ಬಾಣಂತಿಯರ ಶಾಪ ತಟ್ಟುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಧಿಕಾರದ ಅಮಲಿನಲ್ಲಿ ಇರುವ ದುಷ್ಟ ಸರಕಾರ ಇದು. ಅತ್ಯಂತ ಭಂಡ ಸರಕಾರವನ್ನು ಜನರು ನೋಡುತ್ತಿದ್ದಾರೆ. ಕೂಡಲೇ ಮೃತಪಟ್ಟಿರುವ ಬಾಣಂತಿಯರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಅನಾಥವಾಗಿರುವ ಕಂದಮ್ಮಗಳನ್ನು ಸರಕಾರವೇ ದತ್ತು ತೆಗೆದುಕೊಂಡು ಶಿಕ್ಷಣ ಮತ್ತು ಆರೋಗ್ಯ ಸೌಲಭವನ್ನು ಉಚಿತವಾಗಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧಕ್ಷ ಟಿ.ಡಿ.ಮೇಘರಾಜ್, ಮಹಿಳಾಮೋರ್ಚಾ ಜಿಲಾಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಎಸ್.ದತ್ತಾತ್ರಿ, ಮಾಲತೇಶ್, ಸುರೇಖಾ ಮುರುಳೀದರ, ಡಾ.ಶ್ರೀನಿವಾರ ರೆಡ್ಡಿ, ಹರಿಕೃಷ್ಣ ಇನ್ನಿತರರು ಇದ್ದರು.