ಶಿವಮೊಗ್ಗ: ಶುಭಾಶಯ ಕೋರುವ ನೆಪದಲ್ಲಿ ವೈದ್ಯರಿಗೆ ವಿಷಪೂರಿತ ಸ್ವೀಟ್ಸ್ ಬಾಕ್ಸ್ ಕಳುಹಿಸಿದ ಆರೋಪಿಯ ಬಂಧನ
ಶಿವಮೊಗ್ಗ: ಹೊಸವರ್ಷದ ಶುಭಾಶಯ ಕೋರುವ ನೆಪದಲ್ಲಿ ವೈದ್ಯರಿಗೆ ವಿಧಾನ ಪರಿಷತ್ ಧನಂಜಯ್ ಸರ್ಜಿ ಹೆಸರಿನಲ್ಲಿ ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸಿ ಆತಂಕ ಸೃಷ್ಟಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ.
ಬಂಧಿತ ಆರೋಪಿಯನ್ನು ಸೌಹಾರ್ದ ಪಟೇಲ್ ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥನಾಗಿದ್ದು, ವೈದ್ಯರ ಮೇಲಿನ ದ್ವೇಷದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಭದ್ರಾವತಿ ನಿವಾಸಿಯಾಗಿರುವ ಸೌಹಾರ್ದ ಪಟೇಲ್ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಅರವಿಂದ್ ಮತ್ತು ಕೆ.ಎಸ್.ಪವಿತ್ರಾ ಅವರಿಗೆ ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸಿದ್ದನು. ಸ್ವೀಟನ್ನು ಬಾಯಲ್ಲಿ ಇಟ್ಟ ಕೂಡಲೇ ಕಹಿ ಕಹಿ ಅನುಭವ ಆಗಿದೆ. ಕೂಡಲೇ ಪ್ರಕರಣ ಬಯಲಿಗೆ ಬಂದಿದ್ದು, ಸ್ವೀಟ್ ಬಾಕ್ಸ್ ಅನ್ನನು ಲ್ಯಾಬ್ಗೆ ರವಾನೆ ಮಾಡಿದ್ದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ತಪ್ಪೊಪ್ಪಿಕೊಂಡ ಆರೋಪಿ:
ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾನೂನು ಮಹಾ ವಿದ್ಯಾಲಯದಲ್ಲಿ ಪದವಿ ಪಡೆದಿದ್ದ ಸೌಹಾರ್ದ ಪಟೇಲ್, ಎಲ್ಎಲ್ಬಿ ಓದುತ್ತಿರುವಾಗ ತಮ್ಮ ಕಾಲೇಜಿನ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದನು. ಈ ವಿಚಾರ ತಿಳಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ಬುದ್ಧಿವಾದ ಹೇಳಿ ಯುವತಿಯನ್ನು ಸೌಹಾರ್ದ ಪಟೇಲ್ ನಿಂದ ದೂರ ಮಾಡಿದ್ದರೆನ್ನಲಾಗಿದೆ.
ಇದರಿಂದ ಬೇಸರಗೊಂಡ ಸೌಹಾರ್ದ ಪಟೇಲ್ ಖಿನ್ನತೆಗೆ ಹೋಗಿದ್ದನು. ಹೀಗಾಗಿ, ಸೌಹಾರ್ದ ಪಟೇಲ್ಗೆ ಮಾನಸಿಕ ರೋಗ ತಜ್ಞರಾದ ಅರವಿಂದ್ ಮತ್ತು ಕೆ.ಎಸ್.ಪವಿತ್ರಾ ಬಳಿ ಚಿಕಿತ್ಸೆ ಪಡೆಯುತ್ತಿದ್ದನು. ಅಲ್ಲದೆ, ಆತನ ತಂದೆ ತಾಯಿಯೂ ದೂರವಾಗಿ ವಾಸಿಸುತ್ತಿದ್ದರು. ಹೀಗಾಗಿ ಸೌಹಾರ್ದ ಪಟೇಲ್ ಮತ್ತಷ್ಟು ಕುಗ್ಗಿ ಹೋಗಿದ್ದನೆನ್ನಲಾಗಿದೆ.
ಖಿನ್ನತೆಗೆ ಮಾತ್ರೆಗಳ ಮೇಲೆ ಮಾತ್ರೆಗಳನ್ನು ಕೊಟ್ಟ ವೈದ್ಯರ ಮೇಲೆ ಸೌಹಾರ್ದ ಪಟೇಲ್ ಸಿಟ್ಟಾಗಿದ್ದನು. ಇದೇ ಸಿಟ್ಟಿನಲ್ಲಿ ಮಾತ್ರೆಗಳನ್ನು ಪುಡಿಮಾಡಿ ಸ್ವೀಟ್ನಲ್ಲ್ಲಿ ಮಿಶ್ರಣ ಮಾಡಿ ಧನಂಜಯ ಸರ್ಜಿ ಹೆಸರಿನಲ್ಲಿ ಕೊರಿಯರ್ ಮೂಲಕ ಕಳುಹಿಸಿರುವುದಾಗಿ ಪೊಲೀಸರ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.