ರೈತರ ಗೇಣಿ ಜಮೀನು ಕಬಳಿಸಲು ಸಂಚು ಆರೋಪ; ತೀರ್ಥಹಳ್ಳಿಯ ಭೀಮನಕಟ್ಟೆ ಮಠದ ವಿರುದ್ಧ ರೈತರಿಂದ ಪ್ರತಿಭಟನೆ

Update: 2025-01-06 15:11 GMT

ತೀರ್ಥಹಳ್ಳಿ: ಆಲಗೇರಿ ಗ್ರಾಮದ ಸರ್ವೇ ನಂಬರ್ 8ರಲ್ಲಿ ರೈತರ ಗೇಣಿ ಜಮೀನು ಕಬಳಿಸಲು ಸಂಚು ಹೂಡಿರುವುದಾಗಿ ಆರೋಪಿಸಿ ಭೀಮನಕಟ್ಟೆ ಮಠದ ವಿರುದ್ಧ ರೈತರು ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ಅಲ್ಲದೆ, ಗೇಣಿಹಕ್ಕು ಜಮೀನಿಗೆ ಸುಳ್ಳು ನಕ್ಷೆ ದಾಖಲೆ ಸೃಷ್ಟಿಸಿರುವ ಕಂದಾಯ ಇಲಾಖೆ ನೌಕರರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕಂದಾಯ ಇಲಾಖೆಯ ಒಳಗೆ ಇರುವ ಕೆಲವು ಭ್ರಷ್ಟ ನೌಕರರು ತಾಲೂಕಿನ ಭೀಮನಕಟ್ಟೆ ಮಠದೊಂದಿಗೆ ಶಾಮೀಲಾಗಿ ಮಠದ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಆರ್ಟಿಸಿ ದಾಖಲೆಗಳಲ್ಲಿ ನಮೂದಿಸಿದ್ದನ್ನು ಬಹಳ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಗೇಣಿಹಕ್ಕು ಜಮೀನಿಗೆ ಸುಳ್ಳು ನಕ್ಷೆ ದಾಖಲೆ ಸೃಷ್ಟಿಸಿ ಮಠಕ್ಕೆ ಸಹಕರಿಸುತ್ತಿರುವ ಕಂದಾಯ ಇಲಾಖೆ ಗುಮಾಸ್ತ ಸುನೀಲ ಮತ್ತು ಭೂ ಮಾಪಕಿ ವಿಜಯಲಕ್ಷ್ಮೀ ಮತ್ತಿತರ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಾನೂನು ಬಾಹಿರವಾಗಿ 2022ನೇ ಇಸವಿಯಲ್ಲಿ ತಯಾರಿಸಿದ ಸರ್ವೇ ಸ್ಕೆಚ್ ರದ್ದುಗೊಳಿಸಬೇಕು. ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕೆಂದು ಪ್ರತಿಭಟನಾಕಾರರು ತಹಶೀಲ್ದಾರ್ ರಂಜಿತ್ ಎಸ್. ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ರೈತ ಮುಖಂಡ ಕಂಬಳಿಗೆರೆ ರಾಜೇಂದ್ರ, ಮಲೆನಾಡು ಸಂಘರ್ಷ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ನೆಂಪೆ ದೇವರಾಜ್, ಹಿರಿಯ ಸಮಾಜವಾದಿ ಸುಬ್ರಹ್ಮಣ್ಯ ಭಟ್, ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ಕೆಸ್ತೂರು ಮಂಜುನಾಥ್, ತಾಲೂಕು ನಿರ್ದೇಶಕ ಬಾಳೇಹಳ್ಳಿ ಪ್ರಭಾಕರ್, ಯುವ ಜನತಾದಳದ ಅಧ್ಯಕ್ಷ ತಲಬಿ ರಾಘವೇಂದ್ರ ಭಾಗವಹಿಸಿದ್ದರು.

ಗೇಣಿ ಹಕ್ಕಿಗಾಗಿ ಚಳವಳಿಯ ಎಚ್ಚರಿಕೆ

ರೈತರ ತಾಳ್ಮೆ ಪರೀಕ್ಷಿಸುವುದು ಬೇಡ. ಗೇಣಿ ಹಕ್ಕಿಗಾಗಿ ಹೊಸ ಚಳವಳಿ ರೂಪಿಸುತ್ತೇವೆ. ಸುಳ್ಳು ದಾಖಲೆ ಸೃಷ್ಟಿಗೆ ಸಹಕರಿಸಿದವರನ್ನು ಕೂಡಲೇ ಬಂಧಿಸಬೇಕು. ಕೋಣಂದೂರಿನಲ್ಲಿ ಸರಕಾರಿ ಶಾಲೆ, ಮುಖ್ಯ ರಸ್ತೆಯ ಇಕ್ಕೆಲಗಳ ಸ್ವಾಧೀನಾನುಭವ ಜಮೀನು, ದಿಂಡ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಾಲನಿ ವಶಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ರೈತ ಮುಖಂಡ ಕಂಬಳಿಗೆರೆ ರಾಜೇಂದ್ರ ಎಚ್ಚರಿಕೆ ಆರೋಪಿಸಿದರು.

ತಪ್ಪಿತಸ್ಥರ ಗಡಿಪಾರಿಗೆ ಒತ್ತಾಯ

ಕಿರುಕುಳಕ್ಕೆ ರೈತರು ಧೃತಿಗೆಡಲ್ಲ. ಕಾನೂನಿಗೆ ಗೌರವ ಕೊಡುವುದು ರೈತರಿಗೆ ಗೊತ್ತಿದೆ. ಕಾನೂನಿನ ಹೆಸರಲ್ಲಿ ಭೂ ಮಾಫಿಯಾ ನಡೆಸುತ್ತಿದ್ದು, ತಪ್ಪಿತಸ್ಥರನ್ನು ಸರಕಾರ ತಾಲೂಕಿನಿಂದ ಗಡಿಪಾರು ಮಾಡಬೇಕು ಎಂದು ಮಲೆನಾಡು ಸಂಘರ್ಷ ಹೋರಾಟ ಸಮಿತಿಯ ಶಿವಮೊಗ್ಗ ಜಿಲ್ಲಾ ಸಂಚಾಲಕ ನೆಂಪೆ ದೇವರಾಜ್ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News