ದಯಾಮರಣ ಕೋರಿ ತೀರ್ಥಹಳ್ಳಿಯ ಗುತ್ತಿಗೆದಾರರಿಂದ ಸಿಎಂಗೆ ಮನವಿ
ತೀರ್ಥಹಳ್ಳಿ: ಸರ್ಕಾರಿ ಕಾಮಗಾರಿಗಳನ್ನು ಪೂರೈಸಿ, ಎರಡು ವರ್ಷ ಕಳೆದರೂ ಇದುವರೆಗೂ ಹಣ ಪಾವತಿ ಆಗಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರು,ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಆರ್ಥಿಕ ಸಮಸ್ಯೆಯಿಂದ ಬದುಕು ದುಸ್ಥರವಾಗಿದ್ದು, ತಮಗೆ ದಯಾಮರಣ ಕಲ್ಪಿಸುವಂತೆ ತೀರ್ಥಹಳ್ಳಿಯ ಗುತ್ತಿಗೆದಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ನಾವುಗಳು ಹಿಂದಿನ ವರ್ಷಗಳಲ್ಲಿ ಹಲವಾರು ಸರ್ಕಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಅವುಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಆದರೆ ಕಾಮಗಾರಿ ಪೂರ್ಣವಾಗಿ ಎರಡು-ಮೂರು ವರ್ಷಗಳು ಕಳೆದರೂ ಕೆಲಸ ಮಾಡಿದ ಹಣ ನಮಗೆ ಸಂದಾಯವಾಗಿರುವುದಿಲ್ಲ. ಗುತ್ತಿಗೆ ಕೆಲಸವನ್ನೆ ಮಾಡಿಕೊಂಡಿರುವ ನಮಗೆ ಹಣ ಬಾರದಿರುವುದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸರ್ಕಾರದಿಂದ ಬರಬೇಕಾದ ಕಾಮಗಾರಿ ವೆಚ್ಚದ ಹಣವನ್ನು ಕೂಡಲೇ ಪಾವತಿಸುವಂತೆ ಪ್ರಾರ್ಥಿಸುತ್ತೇವೆ. ಇನ್ನೂ ಸಹ ನಮಗೆ ಹಣ ಪಾವತಿಯಾಗದೇ ಇದ್ದಲ್ಲಿ ನಮಗೆಲ್ಲರಿಗೂ ದಯಾ ಮರಣ ಅವಕಾಶವನ್ನು ಕಲ್ಪಿಸಿಕೊಡುವಂತೆ ವಿನಂತಿಸಿಕೊಂಡಿದ್ದಾರೆ.