ಛಲವಾದಿ ನಾರಾಯಣಸ್ವಾಮಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಪ್ರಿಯಾಂಕ್‌ ಖರ್ಗೆಯವರ ರಾಜೀನಾಮೆ ಕೇಳುತ್ತಿದ್ದಾರೆ : ರಮೇಶ್ ಬಾಬು

Update: 2025-01-02 16:11 GMT

ರಮೇಶ್ ಬಾಬು

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ನಾಯಕರು ಬೌದ್ಧಿಕವಾಗಿ ದಿವಾಳಿಯಾಗಿದ್ದು, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಕೇಳುತ್ತಿರುವುದು ತಮ್ಮ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಕೆಪಿಸಿಸಿಯ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.

ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ತೇಜೋವಧೆ ಮಾಡುವ ಕಾರಣಕ್ಕಾಗಿ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರಿಗೆ ಹಲವಾರು ಬಹುಮಾನಗಳನ್ನು ನೀಡಿರುತ್ತದೆ. ಅಂತಹ ಬಳುವಳಿಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನ ಗಳಿಸಿದ ಛಲವಾದಿ ನಾರಾಯಣಸ್ವಾಮಿ, ಮತ್ತೊಮ್ಮೆ ಬಿಜೆಪಿ ಲಾಟರಿ ಯೋಜನೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಪಡೆದಿದ್ದಾರೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯ ಮುಂದೆ ಸ್ವಾಭಿಮಾನವನ್ನು ಬಿಟ್ಟು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿ ಚಡ್ಡಿಯನ್ನು ತಲೆಯ ಮೇಲೆ ಹೊತ್ತು ಸಂಘಪರಿವಾರದ ಅಣತಿಯ ಮೇರೆಗೆ ಹೋರಾಟ ಮಾಡಿದ ನಾರಾಯಣಸ್ವಾಮಿ ಅವರಿಗೆ ವಿಧಾನ ಪರಿಷತ್ತಿನ ಸ್ಥಾನವನ್ನು ಕರುಣಿಸಿದ ಭಾರತೀಯ ಜನತಾ ಪಕ್ಷ, ಖರ್ಗೆರವರ ಕುಟುಂಬವನ್ನು ವ್ಯಕ್ತಿಗತ ನಿಂದನೆ ಮತ್ತು ಟೀಕೆಯ ಮಾಡುವ ಕಾರಣಕ್ಕಾಗಿ ಚಲವಾದಿ ನಾರಾಯಣಸ್ವಾಮಿಗೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕರುಣಿಸಿದೆ ಎಂದು ಹೇಳಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಪಾಠವನ್ನು ಹೇಳುವ ಮೊದಲು ತಮ್ಮ ಹಿನ್ನೆಲೆಯನ್ನು ಮತ್ತು ಭಾರತೀಯ ಜನತಾ ಪಕ್ಷದ ನಾಯಕರ ಮೇಲಿರುವ ಆರೋಪಗಳನ್ನು ಒಮ್ಮೆ ಗಮನಿಸಬೇಕು. ಕರ್ನಾಟಕದ ಕಾಂಗ್ರೆಸ್ ಪಕ್ಷವು ಸೈದ್ಧಾಂತಿಕವಾಗಿ ಭಾರತೀಯ ಜನತಾ ಪಕ್ಷದ ವೈಫಲ್ಯಗಳನ್ನು ರಾಜ್ಯದ ಜನರ ಮುಂದೆ ಇಡುತ್ತಿದ್ದು, ಪ್ರಿಯಾಂಕ್‌ ಖರ್ಗೆರವರು ಸಮರ್ಥವಾಗಿ ಬಿಜೆಪಿ ಮತ್ತು ಸಂಘ ಪರಿವಾರದ ವೈಫಲ್ಯಗಳನ್ನು ಜನರಿಗೆ ತಿಳಿಸುತ್ತಿದ್ದಾರೆ. ಇವರನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಛಲವಾದಿ ನಾರಾಯಣಸ್ವಾಮಿ ಅಂತಹ ನಾಯಕರನ್ನು ಮುಂದೆ ಇಟ್ಟುಕೊಂಡು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News