ಖರ್ಗೆ ಅವರ ಪುತ್ರ ಎಂಬ ಹೆಮ್ಮೆ ನನಗಿದೆ, ಬಿಜೆಪಿ ನಾಯಕರಿಗೇಕೆ ಅವರ ಅಪ್ಪಂದಿರ ಬಗ್ಗೆ ಗೌರವವಿಲ್ಲ : ಪ್ರಿಯಾಂಕ್ ಖರ್ಗೆ

Update: 2025-01-02 14:53 GMT

ಪ್ರಿಯಾಂಕ್ ಖರ್ಗೆ

ಬೆಂಗಳೂರು : ಖರ್ಗೆ ಮಗನಾದ ಕಾರಣ ಸಚಿವ ಸ್ಥಾನ ಸಿಕ್ಕಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರಿಗೆ ಯಾಕೆ ಅವರ ಅಪ್ಪಂದಿರ ಬಗ್ಗೆ ಗೌರವವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಗುರುವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದೇಶಿಸಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದು, ಹೇಗೆ?. ಅಲ್ಲದೆ, ಆರೆಸ್ಸೆಸ್‍ನ ಎಷ್ಟು ಶಾಖೆಗಳಲ್ಲಿ ಅವರು ಕೆಲಸ ಮಾಡಿ ಅಧ್ಯಕ್ಷರಾದರು?. ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಎಂಬ ಹೆಮ್ಮೆ ನನಗಿದೆ. ಬಿಜೆಪಿಯವರಿಗೆ ಯಾಕೆ ಅವರ ಅಪ್ಪಂದಿರ ಬಗ್ಗೆ ಗೌರವ ಇಲ್ಲ ಎಂದು ಕೇಳಿದರು.

ಕ್ರಿಕೆಟ್ ಆಟದಲ್ಲಿ ಬ್ಯಾಟ್ ಹಿಡಿಯಲು ಬಾರದವರನ್ನು ಐಸಿಸಿ ಅಧ್ಯಕ್ಷರನ್ನಾಗಿ ಮಾಡಿದರು ಕುಟುಂಬ ರಾಜಕಾರಣದ ಬಗ್ಗೆ ಅವರು ಮಾತನಾಡುತ್ತಾರೆ. ಕುಟುಂಬ ರಾಜಕಾರಣ ಎಂಬುದು ನಮ್ಮಲ್ಲಿ ಮಾತ್ರವೇ ಇದೆಯೇ ಎಂದ ಅವರು, ನನ್ನ ವಿರುದ್ಧ ಆಪಾದನೆ ಮಾಡುವುದಾದರೆ ಸರಿಯಾದ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಸಚಿನ್ ತನ್ನ ಡೆತ್‌ ನೋಟ್‌ನಲ್ಲಿ ಎಲ್ಲಿಯೂ ನನ್ನ ಹೆಸರನ್ನು ಉಲ್ಲೇಖಿಸಿಲ್ಲ. ಬಿಜೆಪಿಗರು ಸುಖಾಸುಮ್ಮನೆ ನನ್ನ ಬಗ್ಗೆ ವಾದ ಮಾಡುತ್ತಿದ್ದಾರೆ. ಅದರಲ್ಲೂ, ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಪಿ.ರಾಜೀವ್ ಸುಳ್ಳು ಆರೋಪ ಮಾಡಿದ್ದಾರೆ. ಅವರೀಗ ಸುಳ್ಳಿನ ಶೂರರಾಗಿದ್ದಾರೆ. ಇವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಈ ಹಿಂದೆಯೇ ಹಾಕಿದ್ದೆ. ಅವರು ಇಂತಹ ಹೇಳಿಕೆ ನೀಡುವಲ್ಲಿ ಪಿಎಚ್‍ಡಿ ಪಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಗುತ್ತಿಗೆದಾರರ ಸಂತೋಷ್‌ ಪಾಟೀಲ್ ಬರೆದ ಡೆತ್‍ನೋಟ್ ಓದಿದ ಅವರು, ಸಂತೋಷ್‌ ಪಾಟೀಲ್ ನನ್ನ ಸಾವಿಗೆ ನೇರ ಕಾರಣ ಕೆ.ಎಸ್.ಈಶ್ವರಪ್ಪ, ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಂತೋಷ್‌ ಪಾಟೀಲ್ ತಮ್ಮ ಡೆತ್‍ನೋಟ್‍ನಲ್ಲಿ ಉಲ್ಲೇಖ ಮಾಡಿದ್ದರು. ಆದರೆ, ಇದುವರೆಗೂ ಅವರ ಕುಟುಂಬವನ್ನು ಭೇಟಿ ಮಾಡಿಲ್ಲವೇಕೆ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಮಣಿಕಂಠ ರಾಠೋಡ್ ನನಗೆ ಜೀವ ಬೆದರಿಕೆ ಹಾಕಿದ್ದ : 

ಇನ್ನೂ, ಈ ಹಿಂದೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ನೇತೃತ್ವದಲ್ಲಿ ಕಲಬುರಗಿಯಲ್ಲಿ ನನ್ನ ವಿರುದ್ಧ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಾರೆ. ಆದರೆ, ಈ ರಾಠೋಡ್ ವಿರುದ್ಧ ಈಗಾಗಲೇ ಗಂಭೀರ ಆರೋಪದಡಿ ಹಲವು ಪ್ರಕರಣಗಳು ದಾಖಲಾಗಿದ್ದರೂ, ಕ್ರಮ ಆಗಿಲ್ಲ. ಆತ ಈ ಹಿಂದೆ ನನಗೆ ಜೀವ ಬೆದರಿಕೆ ಕೂಡ ಹಾಕಿದ್ದ ಎಂಬ ಆಡಿಯೊವನ್ನು ಉಲ್ಲೇಖಿಸಿದ ಅವರು, ಈಗಲೂ ಆತನ ನೇತೃತ್ವದಲ್ಲಿ ಕಲಬುರಗಿ ಚಲೋ ಹಮ್ಮಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರಿನ ಉಲ್ಲೇಖವಿಲ್ಲ. ಇದಕ್ಕೂ ನನಗೆ ಸಂಬಂಧ ಇಲ್ಲ. ಹಾಗಿದ್ದರೂ ನನ್ನ ವಿರುದ್ಧ ಆರೋಪ ಉದ್ದೇಶಪೂರಕ ಎಂದರು.

ಟೂಲ್‍ಕಿಟ್ ಆರಂಭ..!

ತಮ್ಮ ವಿರುದ್ಧ ಬಿಜೆಪಿ ನಾಯಕರ ಟೂಲ್‍ಕಿಟ್ ಜ.1 ರಿಂದಲೇ ಆರಂಭಗೊಂಡಿದ್ದು, ನನ್ನಿಂದ ರಾಜೀನಾಮೆ ಕೊಡಿಸಲು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಳಂಕ ತರುವ ಹುನ್ನಾರಗಳು ನಡೆಯುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News