ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಸಚಿವ ಸಂಪುಟ ಅನುಮೋದನೆ
ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮಗಳ ಪ್ರಯಾಣದರ ಶೇ.15ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ದರವು ಜನವರಿ 5 ರಿಂದ ಜಾರಿಗೆ ಬರಲಿದೆ.
ಸಚಿವ ಸಂಪುಟದ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಬಿಎಂಟಿಸಿಗೆ ಹತ್ತು ವರ್ಷಗಳ ಹಿಂದೆ ದರ ಪರಿಷ್ಕರಣೆ ಆಗಿತ್ತು. ಅಂದು ಡೀಸೆಲ್ 60.98 ರೂ. ಇತ್ತು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಂದಿನ ಡೀಸೆಲ್ ವೆಚ್ಚ 9 ಕೋಟಿ 16ಲಕ್ಷ ಇದ್ದು, ಈಗ ಪ್ರಸ್ತುತ 13.21ಕೋಟಿ ಹೆಚ್ಚಳ ಆಗಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ ಸಿಬ್ಬಂದಿ ವೆಚ್ಚ 12.85ಕೋಟಿ ಇದ್ದದ್ದು, ಪ್ರಸ್ತುತ 18.36 ಕೋಟಿ ಆಗಿದೆ. ಪ್ರತಿ ದಿನ 9.56ಕೋಟಿ ಹೆಚ್ಚುವರಿ ಹೊರೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಆಗಿದೆ ಎಂದು ತಿಳಿಸಿದರು.
ಎಲ್ಲಾ ಕಾರ್ಪೋರೇಷನ್‌ಗಳು, ನಗರ ಬಸ್ಸುಗಳು, ಐಷಾರಾಮಿ ಬಸ್ಸುಗಳು ಸೇರಿದಂತೆ ಎಲ್ಲರಿಗೂ ಶೇ.15 ಪರಿಷ್ಕರಿಸಲಾಗಿದೆ. ಇದರಿಂದ ಪ್ರತಿ ತಿಂಗಳು 74.85 ಕೋಟಿಗಳಷ್ಟು ಆದಾಯ ಹೆಚ್ಚಾಗಲಿದೆ. ಶಕ್ತಿ ಯೋಜನೆಗಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ 5015 ಕೋಟಿಗಳನ್ನು ಮೀಸಲಿರಿಸಿದೆ. ಪ್ರತಿ ತಿಂಗಳು ನಾಲ್ಕೂ ನಿಗಮಗಳಿಗೆ 417.92 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ. ಕರ್ನಾಟಕ ಅತ್ಯುತ್ತಮ ಆರ್ಥಿಕ ಹೊಣೆಗಾರಿಕೆಯನ್ನು ಅನುಷ್ಠಾನ ಮಾಡಿರುವ ರಾಜ್ಯ ಎಂದು ಸಚಿವರು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ, ಉಡುಪಿಯಲ್ಲಿ ಮೀನುಗಾರಿಕೆ ಬಂದರು :
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕವಾಗಿ ಎರಡು ಮಹಾನಗರ ಪಾಲಿಕೆ ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದಲ್ಲಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದ್ದು, ಅದರ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು 209.13 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮೀನುಗಾರಿಕಾ ಬಂದರು ಆಧುನೀಕರಣ ಹಾಗೂ ಹೂಳೆತ್ತುವ ಕಾಮಗಾರಿ 84.57 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಗೋಶಾಲೆಗಳ ಬಲವರ್ಧನೆಗಾಗಿ 10.50 ಕೋಟಿ ರೂ. ಅನುದಾನ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದ್ದು, 14 ಜಿಲ್ಲೆಗಳಲ್ಲಿ ಗೋಶಾಲೆಗಳ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಮೇಲ್ಮನೆಯ ಒಂದು ಸ್ಥಾನಕ್ಕೆ ನಾಮನಿರ್ದೇಶನ ಈ ನಿಟ್ಟಿನಲ್ಲಿ ಯಾರನ್ನು ಆಯ್ಕೆ ಮಾಡಬಹುದು ಎಂಬ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಸದಸ್ಯ ಕೆ.ತಿಪ್ಪೇಸ್ವಾಮಿ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಆಯ್ಕೆ ಮಾಡಲು ಸಿಎಂಗೆ ಅಧಿಕಾರ ನೀಡಲಾಗಿದೆ. ಅಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಕಟ್ಟಡ ನಿರ್ಮಾಣಕ್ಕೆ 149.75 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2022-23 ಸಾಲಿನ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿ ಲಭ್ಯವಿರುವ 56.92 ಕೋಟಿ ರೂ.ಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರಕಾರಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿನಿಲಯಗಳಿಗೆ ಬೆಡ್ ಶೀಟ್, ಸೊಳ್ಳೆ ಪರದೆಗಳು, ಟ್ರಾಕ್ ಸೂಟ್ ಮತ್ತು ನೈಟ್ ಡ್ರೆಸ್‍ಗಳ ಸಾಮಗ್ರಿಗಳನ್ನು ಪೂರೈಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಬಾಡಿಗೆ ಮತ್ತು ಶಿಥಿಲಾವಸ್ಥೆಯಲ್ಲಿ ಇರುವಂತಹ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 200 ಪಶು ವೈದ್ಯ ಸಂಸ್ಥೆಗಳಿಗೆ 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಬಾರ್ಡ್ ಸಹಾಯ ಅನುದಾನದೊಂದಿಗೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬಿಬಿಎಂಪಿ 3ನೇ ಹಂತದ ಆಯ್ದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಸಂಬಂಧಿಸಿದ ಆದೇಶಗಳನ್ನು ಹಿಂಪಡೆಯುವ ತೀರ್ಮಾನದೊಂದಿಗೆ ಇನ್ನೂ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ..!
ಮೈಸೂರಿನ ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ಒಟ್ಟು 120 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳುವ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. 14 ಎಕರೆ ನಿವೇಶನವುಳ್ಳ ಈ ಕಾಮಗಾರಿಯಲ್ಲಿ ವಿಭಾಗೀಯ ಕಚೇರಿ, ಬಸ್ ಘಟಕಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ಅತ್ಯಾಧುನಿಕ ಕೇಂದ್ರೀಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.
ದೀರ್ಘಾವಧಿ ಸಾಲ 137.85 ಕೋಟಿ ರೂ.ಗಳ ಅನುದಾನ ವಿನಿಯೋಗಿಸಲು ಒಪ್ಪಿಗೆ :
ಕೇಂದ್ರದ ಆರ್ಥಿಕ ಸಚಿವಾಲಯವು ವಿಶೇಷ ಬಂಡವಾಳ ನೆರವಿನ ಯೋಜನೆಯ ಭಾಗ-7(ಎ)ಅಡಿ ಕರ್ನಾಟಕದ ರಾಜ್ಯಕ್ಕೆ ಬಂಡವಾಳ ವೆಚ್ಚಕ್ಕಾಗಿ ದೀರ್ಘಾವಧಿ ಸಾಲದ ರೂಪದಲ್ಲಿ ನೀಡಿರುವ 137.85 ಕೋಟಿ ರೂ.ಗಳ ಅನುದಾನವನ್ನು ವಿನಿಯೋಗಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ನಿವೇಶನ ಹಂಚಿಕೆಗೆ ಅನುಮೋದನೆ..!
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕಕ್ಕೆ ನಿವೇಶನ ಹಂಚಿಕೆ ಮಾಡಲು ಸಂಪುಟ ಒಪ್ಪಿಗೆ ನೀಡಿದ್ದು, ದಾವಣಗೆರೆ ತಾಲೂಕಿನ ಅವರಗೆರೆ ಗ್ರಾಮದ ಸ.ನಂ.186/1234ರ ಅನುಮೋದಿತ ಖಾಸಗಿ ವಸತಿ ಬಡಾವಣೆಯಲ್ಲಿ ನಿವೇಶನ ನಿಗದಿಪಡಿಸಲಾಗಿದೆ. ಅಲ್ಲದೆ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಯಕ ವಿದ್ಯಾರ್ಥಿ ನಿಲಯ-ದಾವಣಗೆರೆ ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ 523.99 ಚ.ಮೀ. ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
‘ರಾಜ್ಯದ ಜನತೆಗೆ ಪಂಚಭಾಗ್ಯ ಯೋಜನೆಯನ್ನು ಕೊಟ್ಟಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಗೆ ಹಣ ಒದಗಿಸಲು ವಿಫಲರಾಗಿ ಸಾರಿಗೆ ಸಂಸ್ಥೆಯು ನಷ್ಟದ ಹಾದಿಯನ್ನು ತುಳಿಯಲು ಕಾರಣರಾಗಿದ್ದಾರೆ. ಮಹಿಳೆಯರಿಗೆ ಉಚಿತ ಪುರುಷರಿಗೆ ಅದರ ಹೊರೆ ಖಚಿತ ಎಂಬುದನ್ನು ಇದೀಗ ಶೇ.15ರಷ್ಟು ಬಸ್ ಪ್ರಯಾಣ ದರ ಏರಿಸುವ ಮೂಲಕ ಸಾರಿಗೆ ವ್ಯವಸ್ಥೆ ಆಶ್ರಯಿಸಿರುವ ಜನರಿಗೆ ಬರೆ ಎಳೆದಿದ್ದಾರೆ. ಶಕ್ತಿ ಯೋಜನೆ ಹೇಗಾಗಿದೆ ಎಂದರೆ ವಾಣಿಜ್ಯ ಉತ್ಪನ್ನಗಳ ಮಾರಾಟದ ಆಕರ್ಷಣೆಗೆ ಮಳಿಗೆಗಳಲ್ಲಿ ‘ಒಂದು ಖರೀದಿಸಿದರೆ-ಒಂದು ಉಚಿತ’ ಬೋರ್ಡ್ ಪ್ರದರ್ಶಿಸುವ ಮಾದರಿಯಲ್ಲಿ ರಾಜ್ಯದ ಜನರಿಗೆ ಟೋಪಿ ಹಾಕಲು ಸರಕಾರ ಹೊರಟಿದೆ. ಸಾರಿಗೆ ದರ ಹೆಚ್ಚಳದ ನಿರ್ಧಾರ ಅವೈಜ್ಞಾನಿಕ ಹಾಗೂ ಜನವಿರೋಧಿಯಾಗಿದೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.