ಮೂರು ತಿಂಗಳಲ್ಲಿ ಒಳಮೀಸಲಾತಿ ಜಾರಿಗೆ : ಮಾಜಿ ಸಚಿವ ಎಚ್.ಆಂಜನೇಯ
ಬೆಂಗಳೂರು : ‘ಪರಿಶಿಷ್ಟ ಜಾತಿಯ ಒಳಮೀಸಲಾತಿ ಇನ್ನೂ ಮೂರು ತಿಂಗಳಲ್ಲಿ ಜಾರಿಗೆ ಬರಲಿದೆ, ಈ ಬಗ್ಗೆ ಯಾವುದೇ ಆತಂಕ ಬೇಡ. ಮೂವತ್ತು ವರ್ಷ ಕಾಲ ಕಾದಿರುವ ನಾವು ಸ್ವಲ್ಪ ತಾಳ್ಮೆಯನ್ನು ವಹಿಸಿದರೆ ಸಿಹಿ ಖಂಡಿತ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಳೆ ಮೈಸೂರು ಭಾಗವೂ ಸೇರಿ ಕೆಲ ಜಿಲ್ಲೆಗಳಲ್ಲಿ ಒಂದೇ ಜಾತಿಯವರು ಎರಡು ಹೆಸರಿನಲ್ಲಿ ಜಾತಿ ಪ್ರಮಾಣ ದೃಢೀಕರಣ ಪತ್ರ ಪಡೆಯುತ್ತಿದ್ದಾರೆ. ಮಾದಿಗ(ಎಡಗೈ) ಸಮುದಾಯದಲ್ಲಿ ‘ಆದಿ ಕರ್ನಾಟಕ’ ಎಂದು ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಹೊಲೆಯ(ಛಲವಾದಿ) ಬಲಗೈ ಸಮುದಾಯದವರೂ ‘ಆದಿ ಕರ್ನಾಟಕ’ ಎಂದು ಜಾತಿ ದೃಢೀಕರಣ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಹೀಗಾಗಿ ಸಮುದಾಯದ ಜನಸಂಖ್ಯೆಯನ್ನು ನಿಖರವಾಗಿ ಬೇರ್ಪಡಿಸಲು ಆಗಿಲ್ಲ. ಈ ಕಾರಣಕ್ಕಾಗಿ ದತ್ತಾಂಶ ವಿಂಗಡಣೆಗೆ, ಆಯೋಗವನ್ನು ರಚನೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ದಿಟ್ಟ ನಿರ್ಧಾರ: ಪರಿಶಿಷ್ಟರ ‘ಒಳ ಮೀಸಲಾತಿ’ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಶೋಷಿತರ ಪರವಾಗಿ ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಏಕಸದಸ್ಯ ಆಯೋಗ ಈಗ ರಚನೆ ಮಾಡಿದ್ದು. ಈ ಆಯೋಗವು ಮೂರು ತಿಂಗಳಲ್ಲಿ ವರದಿಯನ್ನು ನೀಡಬೇಕು. ನಾಲ್ಕನೇ ತಿಂಗಳಲ್ಲಿ ಇದು ಅನುಷ್ಠಾನಕ್ಕೆ ಬರಬೇಕೆಂದು ಸೂಚನೆ ನೀಡಿದ್ದಾರೆ ಎಂದರು.
‘ಬಡವರ, ತುಳಿತಕ್ಕೆ ಒಳಗಾದವರ ಪರವಾಗಿ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರರು. ಒಳ ಮೀಸಲಾತಿ ವಿಚಾರ ನಿರ್ಧಾರವಾಗುವ ತನಕ, ಹೊಸದಾಗಿ ನೇಮಕಾತಿ ಆದೇಶ ಹೊರಡಿಸಬಾರದೆಂದು ಹೇಳಿದ್ದಾರೆ. ಒಳ ಮೀಸಲಾತಿ ಪರವಾಗಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ, ಉಪಚುನಾವಣೆಯ ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಅಭಿನಂದನೆ ತಿಳಿಸುತ್ತೇವೆ ಎಂದರು.
ಹಿಂದಿನ ಬಿಜೆಪಿ ಸರಕಾರ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ರದ್ದು ಮಾಡಿ. ಅಂದಿನ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಮಾಡಿದಂತಹ ವರದಿ ಅನ್ವಯ ಒಳ ಮೀಸಲಾತಿಗೆ ಶಿಫಾರಸ್ಸು ಮಾಡಿತ್ತು. ಮಾದಿಗರಿಗೆ ಶೇ.6, ಛಲವಾದಿ ಶೇ.5.5, ಲಂಬಾಣಿ-ಭೋವಿ ಸಮುದಾಯಕ್ಕೆ ಶೇ.4, ಇತರೆ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಮೀಸಲಾತಿಯನ್ನು ನಿಗದಿ ಮಾಡಲಾಗಿತ್ತು. ಶೇ.15ರಷ್ಟು ಇದ್ದ ಮೀಸಲಾತಿ ಪ್ರಮಾಣವನ್ನು ಶೇ.17ಕ್ಕೆ ಹೆಚ್ಚಳ ಮಾಡಲಾಗಿತ್ತು ಎಂದರು.
ತಾಳ್ಮೆ ಇರಲಿ: ದೀಪಾವಳಿ ನಂತರ ಹೈಕೋರ್ಟಿನ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವನ್ನು ಸಿಎಂ ಸಿದ್ದರಾಮಯ್ಯರ ಸರಕಾರ ರಚನೆ ಮಾಡಬೇಕು. ಮಾದಿಗ ಸಮುದಾಯ ಶಾಂತಿಪ್ರಿಯ ಸಮುದಾಯ. ನಮ್ಮ ಮೇಲೆ ಎಷ್ಟೇ ಶೋಷಣೆ ನಡೆದರೂ, ನಾವು ಎಲ್ಲಿಯೂ ಸಂಯಮ ಕಳೆದುಕೊಂಡಿಲ್ಲ. ಸಿಎಂ ವಿರುದ್ಧ ಕಿಡಿಗೇಡಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ. ಆತನ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಕೆಪಿಸಿಸಿ ಸಂಯೋಜಕ ಮಂಜೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.