ಸಿಎಂ ಆಗಿದ್ದಾಗಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಎಚ್‌ಡಿಕೆ ಈಗೇನು ಮಾಡುತ್ತಾರೆ : ಡಿ.ಕೆ.ಶಿವಕುಮಾರ್ ಪ್ರಶ್ನೆ
ಬೆಂಗಳೂರು : "ಮುಖ್ಯಮಂತ್ರಿಯಾಗಿ ಅಧಿಕಾರ ಇದ್ದಾಗಲೇ ತಾನು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ಕ್ಷೇತ್ರದ ಜನರಿಗೆ ಕುಮಾರಣ್ಣ ಏನೂ ಮಾಡಲಿಲ್ಲ. ಈಗ ಈ ಕ್ಷೇತ್ರದ ಶಾಸಕ ಸ್ಥಾನವೂ ಇಲ್ಲದಿರುವಾಗ ಅವರು ಏನು ತಾನೇ ಮಾಡಲು ಸಾಧ್ಯ? ಇದು ಕ್ಷೇತ್ರದ ಜನರಿಗೂ ಚೆನ್ನಾಗಿ ಗೊತ್ತಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಬುಧವಾರ ವಿಧಾನಸೌಧದ ಬಳಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ನಾವು ಚುನಾವಣೆಗಾಗಿ ಚನ್ನಪಟ್ಟಣದಲ್ಲಿ ಕೆಲಸ ಮಾಡುತ್ತಿಲ್ಲ. ಅಲ್ಲಿ ಶಾಸಕ ಸ್ಥಾನ ತೆರವಾದಾಗಿನಿಂದಲೂ ನಾನು ಹಾಗೂ ರಾಮಲಿಂಗಾರೆಡ್ಡಿ ಅವರು ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದರು.
"ಆ ಕ್ಷೇತ್ರದ ಜನರ ಮನೆ ಬಾಗಿಲಿಗೆ ಸರಕಾರ ಹೋಗಿ ಅವರ ಕಷ್ಟಗಳನ್ನು ಆಲಿಸಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಕೇಳಲು ಕಾರ್ಯಕ್ರಮ ಮಾಡಿದಾಗ ಸುಮಾರು 22 ಸಾವಿರ ಕುಟುಂಬಗಳು ಅರ್ಜಿ ಸಲ್ಲಿಸಿವೆ. ಮನೆ, ನಿವೇಶನ ನೀಡಿಲ್ಲ, ಬಗರ್ ಹುಕ್ಕುಂ ಸಾಗುವಳಿ ಸಭೆ ಮಾಡಿಲ್ಲ, ರಸ್ತೆ ಇಲ್ಲ. ನಮ್ಮ ಕಷ್ಟ ಕೇಳಲು ಈ ಹಿಂದೆ ಶಾಸಕರಾಗಿದ್ದ ಕುಮಾರಣ್ಣ ಬಂದಿಲ್ಲ ಎಂದು ಜನ ಸಮಸ್ಯೆ ಹೇಳಿಕೊಂಡರು. ಈ ಹಿನ್ನೆಲೆಯಲ್ಲಿ ನಾನು ಹಾಗೂ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಚನ್ನಪಟ್ಟಣಕ್ಕೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ರಸ್ತೆ, ನೀರಾವರಿ ಯೋಜನೆಗೆ ಮುಂದಾಗಿದ್ದೇವೆ. ಇದರ ಜತೆಗೆ ಕ್ಷೇತ್ರದ ಜನರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ. ನಿವೇಶನ ಹಂಚಿಕೆ ಮಾಡಲು ಸರಕಾರಿ ಜಾಗ ಗುರುತಿಸಿ ಬಡಾವಣೆ ನಿರ್ಮಾಣ ಕೆಲಸ ಮಾಡುತ್ತಿದ್ದೇವೆ. ಹಕ್ಕುಪತ್ರ ನೀಡುವ ಹಂತಕ್ಕೆ ಕೆಲಸ ಬಂದು ನಿಂತಿದೆ. ಇದರ ಜತೆಗೆ ಎಲ್ಲಾ ಗ್ರಾಮಗಳಲ್ಲಿ ಜಮೀನು ಖರೀದಿ ಮಾಡಲು ಮುಂದಾಗಿದ್ದೇವೆ" ಎಂದು ವಿವರಿಸಿದರು.
ಯಾರಿಂದ ಬೇಕಾದರೂ ಪ್ರಚಾರ ಮಾಡಿಸಲಿ :
ಯದುವೀರ್ ಅವರಿಂದ ಪ್ರಚಾರ ಮಾಡಿಸುತ್ತಿರುವ ಬಗ್ಗೆ ಕೇಳಿದಾಗ, "ಅವರ ಪಕ್ಷದವರು ಅವರಿಗೆ ಬೇಕಾದವರಿಂದ ಪ್ರಚಾರ ಮಾಡಿಸಲಿ. ಅದರಲ್ಲಿ ತಪ್ಪಿಲ್ಲ. ಯದುವೀರ್ ಅವರು ಪ್ರಚಾರಕ್ಕೆ ಬರಬಾರದು ಎಂದು ನಾನ್ಯಾಕೆ ಹೇಳಲಿ? ಅವರ ಪಕ್ಷದ ನಾಯಕರು, ಕುಟುಂಬದವರು ಎಲ್ಲರೂ ಬರಲಿ. ನಮ್ಮ ಪರವಾಗಿ ಜನ ಇದ್ದಾರೆ. ನಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ" ಎಂದು ತಿಳಿಸಿದರು.
ರೈತರ ಹಕ್ಕು ಎತ್ತಿ ಹಿಡಿಯುತ್ತೇವೆ:
ವಕ್ಫ್ ಮಂಡಳಿ ಭೂ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, "ಬಿಜೆಪಿ ಅನಗತ್ಯವಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಅವಧಿಯಲ್ಲೂ ವಕ್ಫ್ ಮಂಡಳಿಯಿಂದ ರೈತರಿಗೆ ನೋಟೀಸ್ ನೀಡಲಾಗಿತ್ತು. ದಾಖಲಾತಿಗಳಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ನಾವು ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇವೆ. ರೈತರಿಗೆ ನೀಡಲಾಗಿರುವ ಭೂಮಿಯನ್ನು ರೈತರ ಭೂಮಿಯಾಗಿ ಮುಂದುವರಿಸಬೇಕು ಎಂದು ತಿಳಿಸಿದ್ದೇವೆ. ನಾವು ಯಾವುದೇ ರೈತರಿಗೆ ತೊಂದರೆ ನೀಡುವುದಿಲ್ಲ. ರೈತರ ಹಕ್ಕನ್ನು ಎತ್ತಿ ಹಿಡಿಯುತ್ತೇವೆ. ಇದು ಸರಕಾರದ ತೀರ್ಮಾನವಾಗಿದ್ದು, ನಾವು ಅದಕ್ಕೆ ಬದ್ಧವಾಗಿದ್ದೇವೆ. ಬಿಜೆಪಿ ಇದನ್ನು ಕೋಮು ವಿಚಾರವಾಗಿ ಬಳಸಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಖಾತೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ನ್ಯಾಯಾಲಯದ ತೀರ್ಮಾನ ಸ್ವಾಗತಿಸುತ್ತೇವೆ:
ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕ ಬಗ್ಗೆ ಕೇಳಿದಾಗ, "ನ್ಯಾಯಾಲಯದ ತೀರ್ಪನ್ನು ನಾವು ಪ್ರಶ್ನೆ ಮಾಡುವುದಿಲ್ಲ. ನ್ಯಾಯಾಲಯದ ತೀರ್ಪನ್ನು ಸರಕಾರ ಬಹಳ ಗೌರವದಿಂದ ಸ್ವಾಗತಿಸುತ್ತದೆ" ಎಂದರು.