ಹಿರಿಯರೆಲ್ಲರೂ ಎರಡೂವರೆ ವರ್ಷಕ್ಕೆ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು: ಕೆಪಿಸಿಸಿ ಸದಸ್ಯರ ಸಭೆಯಲ್ಲಿ ಕೆ.ಎಚ್. ಮುನಿಯಪ್ಪ ಹೇಳಿದ್ದೇನು?
ಬೆಂಗಳೂರು: 'ಹಳಬರೆಲ್ಲರೂ ಎರಡೂವರೆ ವರ್ಷಕ್ಕೆ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು. ಉಳಿದವರಿಗೆ ಅವಕಾಶ ಮಾಡಿಕೊಡಬೇಕು' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಸೋಮವಾರ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ನೀಡಿದ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ವಿಶೇಷವಾಗಿ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಸಚಿವರು ಹೇಳಿದ್ದೇನು?
ಸಿಎಂ, ಡಿಸಿಎಂ ಆಯ್ಕೆ ಮಾಡುವುದು ಹೈಕಮಾಂಡ್ ನಿರ್ಧಾರ. ಆದರೆ ಎರಡೂವರೆ ವರ್ಷದ ಬಳಿಕ ಹಿರಿಯ ಸಚಿವರು ಬೇರೆಯವರಿಗೆ ಅವಕಾಶ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ.
ನಾವು ಸಚಿವರಾಗಿರುತ್ತೇವೆ ನೀವು ನೋಡುತ್ತಾ ಇರಿ ಎನ್ನುವುದು ಸರಿಯಲ್ಲ. ಇದು ಯಾವುದೇ ತ್ಯಾಗವೂ ಅಲ್ಲ. ಹೀಗಾಗಿ, ಹೊಸಬರಿಗೆ ಅವಕಾಶ ಕೊಟ್ಟು ನಾವು ದೇಶದಲ್ಲಿ ಹೊಸ ಪರಂಪರೆಯನ್ನು ಆರಂಭಿಸಿದಂತಾಗುತ್ತದೆ. ಇದು ನನ್ನ ವೈಯುಕ್ತಿಕ ಸಲಹೆ ಎಂದು ಅವರು ನುಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ನಿಗಮ, ಮಂಡಳಿಗಳಿಗೆ ನೇಮಕ ಮಾಡಿ ಅವಕಾಶ ಕಲ್ಪಿಸಬೇಕು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೂ ಪ್ರಮುಖ ಹುದ್ದೆ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.