ಆಕ್ಷೇಪಾರ್ಹ ಪೋಸ್ಟ್‌ ಹಾಕಿದ ಆರೋಪ: ಶಿವಮೊಗ್ಗದ ವಿನೋಬನಗರ ಠಾಣೆಗೆ ​ ಹಾಜರಾದ ಚಕ್ರವರ್ತಿ ಸೂಲಿಬೆಲೆ

Update: 2023-08-31 11:54 GMT

ಶಿವಮೊಗ್ಗ, ಆ.31: ಚಕ್ರವರ್ತಿ ಸೂಲಿಬೆಲೆ ಅವರು ಎಫ್‌ಐಆರ್‌ಗೆ ಸಂಬಂಧಿಸಿದಂತೆ ಇಲ್ಲಿನ ವಿನೋಬನಗರ ಠಾಣೆಗೆ ಹಾಜರಾಗಿ ತಮಗೆ ನೀಡಿದ್ದ ನೋಟೀಸಿಗೆ ಉತ್ತರ ನೀಡಿದ್ದಾರೆ. 

ಕೆಲವು ದಿನಗಳ ಹಿಂದೆ ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ಸೂಲಿಬೆಲೆ ಅವರ ವಿರುದ್ದ ವಿನೋಬನಗರದ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಸೂಲಿಬೆಲೆ ಅವರಿಗೆ ನೋಟೀಸ್ ನೀಡಿ ಠಾಣೆಗೆ ಬಂದು ಹೇಳಿಕೆ ನೀಡುವಂತೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೂಲಿಬೆಲೆ ಅವರು ಠಾಣೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ನಮೋ ಬ್ರಿಗೇಡ್ ಸದಸ್ಯರೊಂದಿಗೆ ಹಾಜರಾಗಿ ಹೇಳಿಕೆ ನೀಡಿದರು.

ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ ಕಾರ್ಯಕರ್ತರು ಮತ್ತು ಸೂಲಿಬಲೆ ಬೆಂಬಲಿಗರು ವಿನೋಬನಗರದ ಪೊಲೀಸ್ ಚೌಕಿ ವೃತ್ತದ ಬಳಿ ಜಮಾಯಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸೂಲಿಬೆಲೆ , ʼʼಕಾಂಗ್ರೆಸ್ ಸರ್ಕಾರ ಸಜ್ಜನ ಶಕ್ತಿಗಳನ್ನು ದಮನ ಮಾಡಲು ಹೊರಟಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಒಂದು ಚಿಕ್ಕ ವಿಷಯವನ್ನು ದೊಡ್ಡದಾಗಿ ಮಾಡಿ ಎಫ್‌ಐಆರ್ ದಾಖಲಿಸಿದೆ. ಇದಕ್ಕೆ ನಾವೇನೂ ಜಗ್ಗುವುದಿಲ್ಲ. ಬಗ್ಗುವುದೂ ಇಲ್ಲ. ಹೆದರುವುದೂ ಇಲ್ಲ. ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ. ಈ ಭಯ ಹುಟ್ಟಿಸುವ ಕೆಲಸ ಸರ್ಕಾರಕ್ಕೆ ಸಾಧ್ಯವಿಲ್ಲ. ನಾವು ಹೋರಾಟದ ಹಾದಿಯಲ್ಲಿ ಬಂದವರು. ಹೋರಾಟವನ್ನು ಮುಂದುವರಿಸುತ್ತೇವೆʼʼ ಎಂದರು. 

ʼʼಕೆಲವು ಕಾಂಗ್ರೆಸ್ ನಾಯಕರು ಚಕ್ರವರ್ತಿಯನ್ನು ಜೈಲಿಗೆ ಕಳಿಸುತ್ತೇವೆ. ಪೊಲೀಸ್ ಠಾಣೆಗೆ ಕರೆಸುತ್ತೇವೆ ಎಂದಿದ್ದರು. ಈ ರೀತಿ ಕರೆಸುತ್ತಾರೆ ಎಂದು ಗೊತ್ತಿರಲಿಲ್ಲ, ಇದು ಪುಕ್ಕಲು ಸರ್ಕಾರʼʼ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News