ಜಾತಿ ನಿಂದನೆ ಆರೋಪ : ಹಾಸ್ಯ ನಟ ಕಾರ್ತಿಕ್ ವಿರುದ್ಧ ಎಫ್‍ಐಆರ್ ದಾಖಲು

Update: 2024-10-08 13:35 GMT

ಕಾರ್ತಿಕ್

ಬೆಂಗಳೂರು: ಜಾತಿ ನಿಂದನೆ ಆರೋಪದ ಮೇಲೆ ಹಾಸ್ಯ ನಟ ಕಾರ್ತಿಕ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ಲೋಕೇಶ್ ಎಂಬುವರು ನೀಡಿದ ದೂರಿನನ್ವಯ ಹಾಸ್ಯ ನಟ ಕಾರ್ತಿಕ್ ಹಾಗೂ ಕಾರ್ಯಕ್ರಮವೊಂದರ ಆಯೋಜಕರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೋವಿ ಜನಾಂಗದ ಕುರಿತು ಹಾಸ್ಯ ನಟ ಕಾರ್ತಿಕ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಕಾರ್ತಿಕ್ ಬಳಸಿರುವ ಪದ ಭೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಆದ್ದರಿಂದ ಕಾರ್ತಿಕ್ ಮಾತ್ರವಲ್ಲದೆ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕರು, ನಿರ್ದೇಶಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಲೋಕೇಶ್ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಹಾಸ್ಯ ನಟ ಕಾರ್ತಿಕ್ ಸ್ಪಷ್ಟನೆ: ‘ಎಫ್‍ಐಆರ್ ದಾಖಲಾಗುತ್ತಿದ್ದಂತೆ ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿದ ಹಾಸ್ಯ ನಟ ಕಾರ್ತಿಕ್, ‘ನಾವು ಎಲ್ಲ ಸಮುದಾಯವನ್ನು ನಗಿಸುವ ಕೆಲಸ ಮಾಡುತ್ತೇವೆ. ಯಾವುದೇ ಸಮುದಾಯವನ್ನು ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ. ಖಾಸಗಿ ವಾಹಿನಿಯ ಹಾಸ್ಯ ಕಾರ್ಯಕ್ರಮವೊಂದರಲ್ಲಿ ನಾನು ಬಳಸಿರುವ ಪದ ‘ಹೊಂಡಾ' ಜಾತಿ ಸೂಚಕ ಪದವಲ್ಲ. ತುಕಾಲಿ ಸಂತೋಷ್‌ ಹೇಳಿದ ಡೈಲಾಗ್‍ಗೆ ಕೌಂಟರ್ ಡೈಲಾಗ್ ಹೇಳುವಾಗ ‘ನೀನು ಗುಂಡನಾ? ರೋಡ್‍ನಲ್ಲಿ ಬಿದ್ದಿರುವ ‘ಹೊಂಡಾ’ ಇದ್ದಂಗ್ ಇದ್ದೀಯಾ' ಎಂದು ಹೇಳಿದ್ದೇನೆ. ಆದರೆ, ಮ್ಯೂಸಿಕ್ ಜೊತೆಗೆ ಡೈಲಾಗ್ ಹೇಳುವಾಗ ಹೊಂಡಾ ಪದ ಸಮುದಾಯದ ಹೆಸರಿಸಿರುವಂತೆ ಕೇಳಿಸಿರಬಹುದು. ಯಾವುದೇ ಸಮುದಾಯವನ್ನು ಹಾಸ್ಯ ಮಾಡುವ ಉದ್ದೇಶವಿಲ್ಲ. ಒಂದು ವೇಳೆ ಆ ರೀತಿ ನಿಮಗೆ ಕೇಳಿಸಿದ್ದಲ್ಲಿ ದಯವಿಟ್ಟು ಕ್ಷಮಿಸಿ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News