‘ನವಲಿ ಅಣೆಕಟ್ಟು’ ತಿಂಗಳೊಳಗೆ ಮೂರು ರಾಜ್ಯಗಳ ಸಿಎಂ ಜತೆ ಚರ್ಚೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-10-08 15:28 GMT

ರಾಯಚೂರು : ಶಿವಮೊಗ್ಗ ಜಿಲ್ಲೆ ಬಳಿಯ ನವಲಿ ಎಂಬಲ್ಲಿ ಅಣೆಕಟ್ಟು ನಿರ್ಮಾಣ ಸಂಬಂಧ ಒಂದು ತಿಂಗಳ ಒಳಗಾಗಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲೆಯ ಸಿಂಧನೂರಿನಲ್ಲಿ ಆಯೋಜಿಸಿದ್ದ ರೈತ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ‘ತುಂಗಾಭದ್ರ ಅಣೆಕಟ್ಟಿಗೆ ಪರ್ಯಾಯವಾಗಿ ನವಲಿಯಲ್ಲಿ ಅಣೆಕಟ್ಟು ನಿರ್ಮಿಸಬೇಕೆಂದು ಒತ್ತಾಯವಿದೆ. ಅಲ್ಲದೆ, 33 ಟಿಎಂಸಿ ನೀರು ವ್ಯರ್ಥವಾಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಯೋಜನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗೇಟ್ ಬದಲಿಗೆ ಕ್ರಮ: ತಜ್ಞರ ಸಮಿತಿಯು ಅಣೆಕಟ್ಟಿನ ಗೇಟ್‍ಗಳ ಬದಲಾವಣೆ ಮಾಡಬೇಕೆಂದು ವರದಿ ನೀಡಿದೆ. ಈ ಬಗ್ಗೆ ಸಿಎಂ, ಜಿಲ್ಲಾ ಮಂತ್ರಿಗಳು, ಸಂಸದರು, ಶಾಸಕರ ಜತೆ ಚರ್ಚೆ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಎಲ್ಲ ಗೇಟ್‍ಗಳನ್ನು ಪರಿಶೀಲನೆ ಮಾಡಿ, ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಗೇಟ್‍ಗಳನ್ನು ಬದಲಾವಣೆ ಮಾಡುತ್ತೇವೆ. ಆ ಮೂಲಕ ಈ ಅಣೆಕಟ್ಟು, ರೈತರ ಬದುಕು ಉಳಿಸಲು ಸರಕಾರ ಕ್ರಮ ವಹಿಸಲಿದೆ ಎಂದರು.

‘ಜಾತಿಗಣತಿ’ ಪಕ್ಷದ ನಿರ್ಧಾರಕ್ಕೆ ಬದ್ಧ: ‘ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ (ಜಾತಿಗಣತಿ) ವಿಚಾರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಈ ವಿಚಾರದಲ್ಲಿ ನಮ್ಮ ಪಕ್ಷ ಏನು ಹೇಳುತ್ತದೆಯೋ ಅದನ್ನೇ ನಾವು ಮಾಡುತ್ತೇವೆ’

-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

ಜನರ ತೀರ್ಪನ್ನು ಸ್ವಾಗತಿಸುತ್ತೇವೆ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ಈ ತೀರ್ಪು ನಮಗೆ ದೊಡ್ಡಪಾಠವಾಗಿದ್ದು, ಮುಂದೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಪಕ್ಷ ಎಲ್ಲಿ ಎಡವಿದೆ ಎನ್ನುವುದನ್ನು ನಮ್ಮ ನಾಯಕರು ಪರಿಶೀಲಿಸಲಿದ್ದಾರೆ. ಮತದಾರ ತೀರ್ಪನ್ನು ಎಲ್ಲರೂ ಗೌರವಿಸಬೇಕು. ನಾವು ಚುನಾವಣೋತ್ತರ ಸಮೀಕ್ಷೆಯನ್ನು ನಂಬಿರಲಿಲ್ಲ. ಆದರೆ ಜನ ನಮಗೆ ಬಹುಮತ ನೀಡುತ್ತಾರೆಂಬ ನಿರೀಕ್ಷೆ ಇತ್ತು. ಜಮ್ಮು-ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತ ಬರಲಿದೆ ಎಂಬ ವಿಶ್ವಾಸವಿತ್ತು. ಅದರಂತೆ ಬಂದಿದೆ’

-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News