ಡೀಸೆಲ್ ಅಕ್ರಮ ಸಾಗಣೆ ಆರೋಪ: ಲಾರಿ ಮಾಲಕರ ವಿರುದ್ಧದ ಪ್ರಕರಣ ರದ್ದು

Update: 2023-08-03 16:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.3: ಅಕ್ರಮವಾಗಿ ಡೀಸೆಲ್ ಸಾಗಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಾರಿ ಮಾಲಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ರದ್ದುಪಡಿಸಿರುವ ಹೈಕೋರ್ಟ್, ಇಂಥ ಸಂದರ್ಭಗಳಲ್ಲಿ ದಾಳಿ ಮಾಡುವಾಗ ಡಿವೈಎಸ್‍ಪಿ ಶ್ರೇಣಿಗಿಂತಲೂ ಕೆಳಗಿನ ಅಧಿಕಾರಿ ಇರಬಾರದು ಎಂಬ ಕಾನೂನು ಪಾಲನೆ ಅಗತ್ಯ ಎಂದು ಆದೇಶಿಸಿದೆ.

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಮುಳಬಾಗಿಲುತಾಲೂಕಿನ ನಂಗಲಿ ಗ್ರಾಮದ ಸಾದಿಕ್ ಪಾಷ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

ನ್ಯಾಯಪೀಠವು, ಐಪಿಸಿ ಕಲಂಗಳ ಅಡಿಯಲ್ಲಿ ದಾಖಲಿಸಿರುವ ಅಪರಾಧ ಇಲ್ಲಿ ಅನ್ವಯ ಆಗುವುದಿಲ್ಲ. ಅಂತೆಯೇ, ಮೋಟಾರು ಸ್ಪಿರಿಟ್ ಮತ್ತು ಹೈ–ಸ್ಪೀಡ್ ಡೀಸೆಲ್ ಸಾಗಣೆ, ನಿಯಂತ್ರಣ ವಿತರಣೆ ಮತ್ತು ಅಕ್ರಮ ತಡೆ ಆದೇಶ–1988ರ ಉಪನಿಯಮಗಳ ಅನುಸಾರ ಈ ಪ್ರಕರಣದಲ್ಲಿ ಸಬ್ ಇನ್‍ಸ್ಪೆಕ್ಟರ್‍ಗೆ ದಾಳಿ, ತಪಾಸಣೆ ಮತ್ತು ಜಪ್ತಿ ಮಾಡುವ ಅಧಿಕಾರ ಇರುವುದಿಲ್ಲ ಎಂಬುದನ್ನು ಎತ್ತಿ ಹಿಡಿದಿದೆ.

ಪ್ರಕರಣವೇನು?: ಮುದಗಲ್–ಚಿತ್ತೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾನೂನು ಬಾಹಿರವಾಗಿ ಲಾರಿಯ ಟ್ಯಾಂಕರ್‍ನಲ್ಲಿ ಡೀಸೆಲ್ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಸ್ಥಳದಲ್ಲೇ ಲಾರಿಯನ್ನು ಜಪ್ತಿ ಮಾಡಿ ಚಾಲಕ ಮತ್ತು ಮಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿತ್ತು.

ಲಾರಿಯ ಮಾಲಕರಾದ ಸಾದಿಕ್ ಪಾಷ ಮುಳಬಾಗಿಲಿನಲ್ಲಿ ಎಸ್‍ಡಬ್ಲ್ಯುಎಸ್ & ಸನ್ಸ್ ಹೆಸರಿನಲ್ಲಿ ಪೆಟ್ರೊಲ್ ಬಂಕ್ ಹೊಂದಿದ್ದು, ‘ನಾನು ಡೀಸೆಲ್ ಸಾಗಣೆ ಪರವಾನಗಿ ಹೊಂದಿದ್ದು, ನನ್ನ ವಿರುದ್ಧ ಹೂಡಲಾಗಿರುವ ಪ್ರಕರಣ ಕಾನೂನುಬಾಹಿರವಾಗಿದೆ‘ ಎಂದು ಪ್ರತಿಪಾದಿಸಿದ್ದರು. ಅಂತೆಯೇ, ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News