ಸರಕಾರಿ ವಾಹನ ದುರುಪಯೋಗ ಆರೋಪ: ತಪ್ಪೊಪ್ಪಿಕೊಂಡ ತುರುವೇಕೆರೆ ಕಾರ್ಯನಿರ್ವಾಹಕ ಅಧಿಕಾರಿ

Update: 2024-07-08 14:57 GMT

ಬೆಂಗಳೂರು: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ(ಈ.ಓ)ಯು ಸರಕಾರಿ ವಾಹನವನ್ನು ವೈಯಕ್ತಿಕ ಚಟುವಟಿಕೆಗಳಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.

ತುರುವೇಕೆರೆ ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವರಾಜಯ್ಯ ಎಂಬವರು ಸರಕಾರಿ ಕೆಲಸಕ್ಕೆಂದು ತಮಗೆ ನೀಡಿರುವ ವಾಹನವನ್ನು ವೈಯಕ್ತಿಕ ಕೆಲಸಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಸ್ಥಳೀಯರು ಆರೋಪಿದ್ದಾರೆ.

ಶಿವರಾಜಯ್ಯ ಅವರು ಮಾಗಡಿ ತಾಲೂಕಿನಲ್ಲಿ ವಾಸವಿದ್ದು, ಪ್ರತಿನಿತ್ಯ ಮಾಗಡಿಯಿಂದ ತುರುವೇಕೆರೆಗೆ ಹೋಗಿಬರಲು ಬಳಸುತ್ತಾರೆ. ಅಲ್ಲದೆ, ಕರ್ತವ್ಯ ಹೊರತುಪಡಿಸಿ ಇತರೆ ತಮ್ಮ ವೈಯಕ್ತಿಕ ಕಾರ್ಯ ಚಟುವಟಿಕೆಗಳಿಗೆ ಸರಕಾರಿ ವಾಹನ ಹಾಗೂ ಚಾಲಕನನ್ನು ಉಪಯೋಗಿಸಿಕೊಳ್ಳುತ್ತಾರೆ ಎಂದು ಸ್ಥಳೀಯ ಸಾರ್ವಜನಿಕರು ದೂರಿದ್ದಾರೆ.

ಈ ಬಗ್ಗೆ ಕೆಆರ್‌ಎಸ್ ಪಕ್ಷದ ತಿಪಟೂರು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚನ್ನಯ್ಯ ಅವರ ನೇತೃತ್ವದ ನಿಯೋಗವು ಸೋಮವಾರ ಮಾಗಡಿ-ಕುಣಿಗಲ್ ಮಾರ್ಗವಾಗಿ ಶಿವರಾಜಯ್ಯ ಅವರು ಸರಕಾರಿ ವಾಹನದಲ್ಲಿ ಚಲಿಸುವ ವೇಳೆಯಲ್ಲಿ ಅಂಚೆಪಾಳ್ಯದ ಬಳಿ ವಾಹನ ನಿಲ್ಲಿಸಿ ಪ್ರಶ್ನಿಸಿದೆ.

ಈ ಕುರಿತಂತೆ ‘ಇನ್ಮುಂದೆ ಯಾವುದೇ ವೈಯಕ್ತಿಕ ಕೆಲಸಗಳಿಗೆ ಸರಕಾರಿ ವಾಹನ ಬಳಸುವುದಿಲ್ಲ, ಸರಕಾರಿ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ’ ಎಂದು ತಪ್ಪೊಪ್ಪಿಕೊಂಡ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ ಅವರು ಸರಕಾರಿ ವಾಹನದಿಂದ ಇಳಿದು ಖಾಸಗಿ ವಾಹನದಲ್ಲಿ ತೆರಳಲು ಮುಂದಾದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News