ಸಾಕ್ಷ್ಯ ನಾಶದ ಆರೋಪ; ಒಂದೇ ಪ್ರಕರಣಕ್ಕೆ ಎರಡು ದೂರು: ವಿನಯ್ ಕುಲಕರ್ಣಿ ಪರ ವಕೀಲರ ಆಕ್ಷೇಪ

Update: 2023-11-24 15:39 GMT

ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‍ಗೌಡ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶದ ಆರೋಪದಡಿ ದಾಖಲಿಸಲಾಗಿರುವ ಎರಡು ಪ್ರತ್ಯೇಕ ದೂರುಗಳನ್ನು ಪ್ರಕರಣದ ಆರೋಪಿಯಾದ ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಪರ ವಕೀಲರು ಹೈಕೋರ್ಟ್‍ನಲ್ಲಿ ಬಲವಾಗಿ ಆಕ್ಷೇಪಿಸಿದ್ದಾರೆ.

ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪದಡಿ ಐಪಿಸಿ ಕಲಂ 195ರ ಅನುಸಾರ ಸಿಬಿಐ ದಾಖಲಿಸಿರುವ ಖಾಸಗಿ ದೂರನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯ(ಸಿಸಿಎಚ್–82) ವಿಚಾರಣೆಗೆ ಪರಿಗಣಿಸಿದ್ದು, ಇದನ್ನು ರದ್ದುಪಡಿಸಬೇಕು ಎಂದು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ವಕೀಲರು, ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಒಂದೇ ಆರೋಪದಡಿ ಎರಡು ದೂರುಗಳನ್ನು ದಾಖಲಿಸಲಾಗಿದೆ. ಇದು ಸಂವಿಧಾನದ 20ನೇ ವಿಧಿಗೆ ವಿರುದ್ಧವಾಗಿದ್ದು ಇದನ್ನು ರದ್ದುಪಡಿಸಬೇಕು ಎಂದು ಪೀಠಕ್ಕೆ ಕೋರಿದರು. ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲರು, ಸಮಯಾವಕಾಶ ಕೋರಿದ ಕಾರಣ ವಿಚಾರಣೆಯನ್ನು ಡಿಸೆಂಬರ್ 1ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ಯೋಗೀಶ್‍ಗೌಡ ಹತ್ಯೆ 2016ರ ಜೂನ್‍ನಲ್ಲಿ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್ ನಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿ, ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಒಂಬತ್ತು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News