ಬಡವರ ಪರ ಕಾಳಜಿಯಿಂದಲೇ 1,80,253 ಕುಟುಂಬಗಳಿಗೆ ಸೂರು ಕಲ್ಪಿಸುವ ತೀರ್ಮಾನ: ಸಿಎಂ ಸಿದ್ದರಾಮಯ್ಯ

Update: 2024-03-02 16:21 GMT

ಬೆಂಗಳೂರು: ಕಾಂಗ್ರೆಸ್ ಸರಕಾರಕ್ಕೆ ಬಡವರ ಪರ ಕಾಳಜಿ ಇದೆ. ಆದಕ್ಕಾಗಿಯೇ ಗ್ಯಾರಂಟಿ ಆರ್ಥಿಕ ಹೊರೆ ನಡುವೆಯೂ 1,80,253 ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ನಗರದ ಕೆ.ಆರ್.ಪುರದ ನಗರೇಶ್ವರ ನಾಗೇನಹಳ್ಳಿ ಬಳಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಏಕ ಕಾಲದಲ್ಲಿ 36,789 ಮನೆಗಳ ಹಂಚಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯಾದ್ಯಂತ 1,80,253 ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಮೊದಲನೇ ಕಂತಿನಲ್ಲಿ 500 ಕೋಟಿ ರೂ. ಬಿಡುಗಡೆ ಮಾಡಿದ್ದು, ಮೊದಲ ಹಂತದಲ್ಲಿ 36,789 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ ಮನೆ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು.

ಬಡವರು ಸಂಕಷ್ಟದಲ್ಲಿದ್ದಾರೆ ಎಂದು ಸಚಿವ ಝಮೀರ್ ಅಹಮದ್ ಖಾನ್ ಹೇಳಿದ ತಕ್ಷಣ ಫಲಾನುಭವಿಗಳ ವಂತಿಕೆ ಐದು ಲಕ್ಷ ರೂ.ಗಳನ್ನು ಸರಕಾರವೇ ಭರಿಸುವ ತೀರ್ಮಾನ ಕೈಗೊಂಡಿತು. ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತದೆ. ಆದರೆ, ಪ್ರಧಾನಮಂತ್ರಿ ಅವಾಸ್ ಯೋಜನೆ ಎಂದು ಬಡವರು ಮನೆ ಕಟ್ಟಿಕೊಳ್ಳಲು 1.50ಲಕ್ಷ ರೂ. ಸಬ್ಸಿಡಿ ನೀಡಿ 1ಲಕ್ಷ 38 ಸಾವಿರ ರೂ. ಜಿಎಸ್‍ಟಿ ಕಟ್ ಮಾಡುತ್ತದೆ. ಇದು ಇವರ ಕಾಳಜಿ ನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾವು ನುಡಿದಂತೆ ನಡೆದಿದ್ದೇವೆ. ಪ್ರತಿ ಕುಟುಂಬಕ್ಕೆ ನಮ್ಮ ಗ್ಯಾರಂಟಿ ಯೋಜನೆಯಿಂದ ತಿಂಗಳಿಗೆ ಕನಿಷ್ಠ ಐದು ಸಾವಿರ ರೂ. ದೊರೆಯುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಡವರ ಪರ ಬದ್ಧತೆಯಿದೆ. ಬಿಜೆಪಿ ಬರೀ ಸುಳ್ಳು ಹೇಳುವುದು ಬಿಟ್ಟರೆ, ಅವರ ಅವಧಿಯಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ಬುರುಡೆ ಬಿಟ್ಟುಕೊಂಡು ಹೋಗುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಿದ್ದೀರಿ, ಲೋಕಸಭೆ ಚುನಾವಣೆಯಲ್ಲೂ ತಕ್ಕ ಪಾಠ ಕಳಿಸಿ ಎಂದು ಸಿದ್ದರಾಮಯ್ಯ ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಅನ್ನ, ಆರೋಗ್ಯ, ಅಕ್ಷರ, ಆಶ್ರಯ ಇವು ನಮ್ಮ ಸರಕಾರದ ಮೂಲಮಂತ್ರ. ಅಸಹಾಯಕರ, ಬಡವರ ಏಳಿಗೆಯೇ ನಮ್ಮ ಆದ್ಯತೆ. ಉದ್ಯೋಗ, ಕುಡಿಯುವ ನೀರಿಗೆ ಮೊದಲು ಪ್ರಾಶಸ್ತ್ಯ ನೀಡುತ್ತೇವೆ ಎಂದರು.

ಈ ದೇಶದ ಬಡವರಿಗೆ ಮನೆ ನೀಡಬೇಕು ಎಂದು ಮೊದಲು ಕಾನೂನು ತಂದಿದ್ದು ಇಂದಿರಾಗಾಂಧಿ ಅವರು. ಮನೆ ಬಾಗಿಲಿಗೆ ಬಂತು ಸರಕಾರ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ರಾಜೀವ್ ಗಾಂಧಿ ವಸತಿ ನಿಗಮದ ಮನೆಗಳಿಗೆ ಸರಕಾರ ನಿಗಧಿ ಮಾಡಿರುವಷ್ಟು ಹಣ ನೀಡಲು ಆಗುವುದಿಲ್ಲ ಎಂದು ಮನವಿ ಸಲ್ಲಿಸಿದ್ದರು. ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಕ್ಯಾಬಿನೆಟ್ ಮುಂದೆ ಇಟ್ಟು 5 ಲಕ್ಷವನ್ನು ಸರಕಾರವೇ ನೀಡಿ ಬಡವರಿಗೆ ಮನೆ ನೀಡುವಂತೆ ಮಾಡಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲೇ ಐತಿಹಾಸಿಕ ತೀರ್ಮಾನ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬಡವರ ಮನೆ ಮೇಲೆಯೂ ಕೇಂದ್ರ ಸರಕಾರ ಜಿಎಸ್‍ಟಿ ಹಾಕಿದೆ. ಇದು ದುರ್ದೈವದ ಸಂಗತಿ. ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರಿಗೆ ಇಲ್ಲಿಂದಲೇ ಮನವಿ ಮಾಡುತ್ತೇನೆ. ಬಡವರ ಮನೆ ಮೇಲೆ ಜಿಎಸ್‍ಟಿ ಹಾಕಬೇಡಿ ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ವಸತಿ ಸಚಿವ ಝಮೀರ್ ಅಹಮದ್ ಖಾನ್ ಮಾತನಾಡಿ, ಇಂದು ವಸತಿ ಸಚಿವನಾಗಿ ನನಗೆ ಅತ್ಯಂತ ಸಂತೋಷದ ದಿನ. 1,80,253 ಕುಟುಂಬಗಳು 2015ರಿಂದ ಮನೆ ಇಲ್ಲದೆ ಸಂಕಷ್ಟದಲ್ಲಿದ್ದವು. ಸಿದ್ದರಾಮಯ್ಯ ಅವರಿಂದಾಗಿ ಮನೆ ಸಿಕ್ಕಂತಾಗಿದೆ. ಬೇರೆ ಯಾರೇ ಇದ್ದರೂ ಇದು ಸಾಧ್ಯವಾಗುತ್ತಿರಲಿಲ್ಲ. ಸಿದ್ದರಾಮಯ್ಯ ಅವರ ಬಳಿ ನಾನು ಪ್ರಸ್ತಾಪ ಮಾಡಿದಾಗ ಐದು ಗ್ಯಾರಂಟಿಯಿಂದ ಒಪ್ಪುವರೋ, ಇಲ್ಲವೋ ಎಂಬ ಅತಂಕದಲ್ಲಿದ್ದೆ. ಆದರೆ ಅವರಿಗೆ ಬಡವರ ಬಗ್ಗೆ ಕಾಳಜಿ ಇರುವುದರಿಂದ ಒಪ್ಪಿ 6,170 ಕೋಟಿ ರೂ. ಪೈಕಿ ಮೊದಲ ಕಂತು 500 ಕೋಟಿ ರೂ. ಬಿಡುಗಡೆ ಮಾಡಿದರು. ಮುಂದಿನ ವರ್ಷದ ವೇಳೆಗೆ 1,80,253 ಮನೆ ಸಹ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಶಾಸಕ ಭೈರತಿ ಬಸವರಾಜ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಗೋವಿಂದರಾಜು, ಪರಿಷತ್ ಸದಸ್ಯ ಪುಟ್ಟಣ್ಣ, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹಣಕಾಸು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅತೀಕ್, ವಸತಿ ಇಲಾಖೆ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜ್, ಗೃಹಮಂಡಳಿ ಆಯುಕ್ತೆ ಕವಿತಾ ಮಣ್ಣಿಕೇರಿ, ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಉಪಸ್ಥಿತರಿದ್ದರು.

ಝಮೀರ್ ಅಹಮದ್‍ಗೆ ಸಿಎಂ-ಡಿಸಿಎಂ ಶಬ್ಬಾಸ್‍ಗಿರಿ: ವಸತಿ ಇಲಾಖೆ ಹೊಣೆಗಾರಿಕೆ ಹೊತ್ತ ಸಚಿವ ಜಮೀರ್ ಅಹಮದ್ ಖಾನ್ ಬಡವರ ಪರ ಕಾಳಜಿ ಇಟ್ಟುಕೊಂಡು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಝಮೀರ್ ಬಡವರ ಪರ, ಅದಕ್ಕಾಗಿಯೇ ವಸತಿ ಇಲಾಖೆ ಜವಾಬ್ದಾರಿ ಕೊಟ್ಟೆ. ಸಮರ್ಥವಾಗಿ ನಿರ್ವಹಣೆ ಮಾಡಿ ನನ್ನ ಪೀಡಿಸಿ 36,789 ಕುಟುಂಬಗಳಿಗೆ ಮನೆ ಕೊಟ್ಟಿದ್ದಾರೆ. ಇದು ಅವರ ಬದ್ಧತೆ ಎಂದು ಶ್ಲಾಘಸಿದರು. ಡಿ.ಕೆ.ಶಿವಕುಮಾರ್ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮನೆ ಹಿಂದೆಂದೂ ಕೊಟ್ಟಿರಲಿಲ್ಲ, ಝಮೀರ್ ಹಠ ಹಿಡಿದು ಈ ಕೆಲಸ ಮಾಡಿದ್ದಾರೆ. ಅವರು ಹಿಡಿದ ಕೆಲಸ ಬಿಡಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News