ಅರಣ್ಯ ಸಂರಕ್ಷಣಾ ಕಾಯ್ದೆ 1980 ಕ್ಕೆ ತಿದ್ದುಪಡಿ | ಒಡಿಶಾ ಮಾದರಿ ಜಾರಿಗೆ ಆಗ್ರಹ: ಆರ್ ಎಂ ಮಂಜುನಾಥ್ ಗೌಡ
ಶಿವಮೊಗ್ಗ, ಸೆ.08: ಕೇಂದ್ರ ಸರ್ಕಾರ ಅರಣ್ಯ ಸಂರಕ್ಷಣಾ ಕಾಯ್ದೆ 1980ಕ್ಕೆ ತಿದ್ದುಪಡಿ ತಂದು 12 ಡಿಸೆಂಬರ್ 1996ರ ದಿನದಂದು ಅಥವಾ ಇದಕ್ಕೆ ಪೂರ್ವದಲ್ಲಿ ರಾಜ್ಯ ಸರ್ಕಾರ ಅರಣ್ಯೇತರ ಉದ್ದೇಶಗಳಿಗಾಗಿ ಬಿಡುಗಡೆಗೊಳಿಸಿದ ಅರಣ್ಯ ಭೂಮಿಯನ್ನು ಅರಣ್ಯ ಕಾಯ್ದೆ 1980 ರಿಂದ ಹೊರತುಪಡಿಸಿದೆ.ಹೀಗಾಗಿ ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡುವಂತೆ ಕಾಂಗ್ರೆಸ್ ಕೆಪಿಸಿಸಿ ಸಹಕಾರಿ ವಿಭಾಗದ ಸಂಚಾಲಕ ಆರ್.ಎಂ ಮಂಜುನಾಥ್ ಗೌಡ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,2023 ಆ.4 ರಂದು ಲೋಕಸಭೆಯ ಅನುಮೋದನೆಯೊಂದಿಗೆ ಕೇಂದ್ರ ಸರ್ಕಾರ ಅರಣ್ಯ ಸಂರಕ್ಷಣಾ ಕಾಯ್ದೆ 1980ಕ್ಕೆ ತಿದ್ದುಪಡಿ ಮಾಡಿದ್ದು,ಈ ತಿದ್ದುಪಡಿಯನ್ವಯ ಸೆಕ್ಷನ್ 4 1(ಅ)(Z) ಮತ್ತು (ಚಿ) ಕಲಂಗಳಲ್ಲಿ ವಿವರಿಸಿದ ಅರಣ್ಯ ಭೂಮಿ ಮಾತ್ರ ಕಾಯ್ದೆಯ ಪ್ರಕಾರ ಅರಣ್ಯ ಸಂರಕ್ಷಣಾ ಕಾಯ್ದೆ ವ್ಯಾಪ್ತಿಗೆ ಬರಲಿದೆ.ಹೀಗಾಗಿ ರಾಜ್ಯ ಸರ್ಕಾರಗಳು ಅರಣ್ಯೇತರ ಉದ್ದೇಶಗಳಿಗೆ ಬಿಡುಗಡೆಗೊಳಿಸಿದ ಭೂಮಿಗಳನ್ನು ಡಿನೋಟಿಫಿಕೇಷನ್ ಮಾಡಬಹುದಾಗಿದೆ ಎಂದು ತಿಳಿಸಿದರು.
ಲಿಂಗಮನಕ್ಕಿ ಜಲಾಶಯದಿಂದ ಮುಳುಗಡೆಯಾದ ಸಂತ್ರಸ್ಥರುಗಳಿಗೆ ಪುನರ್ವಸತಿಗಾಗಿ ಶಿವಮೊಗ್ಗ, ಹೊಸನಗರ, ಶಿಕಾರಿಪುರ, ತೀರ್ಥಹಳ್ಳಿ, ಸಾಗರ,ಸೊರಬ ಮತ್ತು ಭದ್ರಾವತಿ ತಾಲೂಕುಗಳಲ್ಲಿ 1959 ರಿಂದ 1969 ರ ಅವಧಿಯಲ್ಲಿ ಸರ್ಕಾರಿ ಆದೇಶ ಹೊರಡಿಸಿ 9934 ಎಕರೆ 2 ಗುಂಟೆ ಅರಣ್ಯ ಭೂಮಿಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಡಿನೋಟಿಫಿಕೇಷನ್ ಮಾಡಿತ್ತು.ಆದರೆ ಪರಿಸರವಾದಿಗಳು ಸರ್ಕಾರದ ಡಿನೋಟಿಫಿಕೇಷನ್ ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಹಾಕಿದ್ದರು.ಡಿನೋಟಿಫಿಕೇಷನ್ ಮಾಡುವಾಗ ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಪ್ರಕಾರ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂದು ರಾಜ್ಯ ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರದ ಆದೇಶವನ್ನು ವಜಾಗೊಳಿಸಿತ್ತು.ಹೀಗಾಗಿ ಕೇಂದ್ರ ಸರ್ಕಾರ ಅರಣ್ಯ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿಯ ಪ್ರಕಾರ 9934 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಿಂದ ಹೊರತುಪಡಿಸಲಾಗಿದ್ದು,ರಾಜ್ಯ ಸರ್ಕಾರ ಕೂಡಲೇ ಈ ಭೂಮಿ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಡೀಮ್ಡ್ ಫಾರೆಸ್ಟ್ ಎಂದು ಕಂದಾಯ ಇಲಾಖೆಗೆ ಸೇರಿದ ಸೊಪ್ಪಿನ ಬೆಟ್ಟ, ಕುಷ್ಕಿ,ಬ್ಯಾಣ,ಖಾನು ಇತ್ಯಾದಿ ಭೂಮಿಯನ್ನು ಕಾಯ್ದೆಯಿಂದ ಹೊರಗಿಡಲಾಗಿದೆ.ಹಾಗಾಗಿ ರಾಜ್ಯ ಸರ್ಕಾರ ಈ ಭೂಮಿಯನ್ನು ಕಂದಾಯ ಇಲಾಖೆಯ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.
ಸೆ.14 ರಂದು ಉನ್ನತಮಟ್ಟದ ಸಭೆ:
ಕಾಂಗ್ರೆಸ್ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ಡಿನೋಟಿಫಿಕೇಷನ್ ಮಾಡಿತ್ತು.ಆದರೆ ನ್ಯಾಯಾಲಯದ ಆದೇಶವನ್ನು ಮುಂದಿಟ್ಟುಕೊಂಡು ಹಿಂದಿನ ಬಿಜೆಪಿ ಸರ್ಕಾರ ಡಿನೋಟಿಫಿಕೇಷನ್ ರದ್ದು ಮಾಡಿತ್ತು.ಹೀಗಾಗಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಈಗಾಗಲೇ ಉನ್ನತ ಅಧಿಕಾರಿಗಳ ಸಭೆ ನಡೆಸಲಾಗಿದೆ.ಸೆ.14 ರಂದು ಸಚಿವ ಮಧುಬಂಗಾರಪ್ಪ ಅಧ್ಯಕ್ಷತೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮತ್ತೊಂದು ಸಭೆ ನಡೆಯಲಿದೆ.ಈ ಸಭೆಯಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂರಕ್ಷಣಾ ಕಾಯ್ದೆ 1980ಕ್ಕೆ ತಿದ್ದುಪಡಿ ತಂದಿರುವ ಬಗ್ಗೆ ಚರ್ಚೆ ಮಾಡಲಾಗುವುದು.ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಒಡಿಶಾ ಮಾದರಿ ಆದೇಶ ಜಾರಿಗೆ ಆಗ್ರಹ:
ಕೇಂದ್ರ ಸರ್ಕಾರ ಅರಣ್ಯ ಸಂರಕ್ಷಣಾ ಕಾಯ್ದೆ 1980ಕ್ಕೆ ತಿದ್ದುಪಡಿ ತಂದ ಬೆನ್ನಲ್ಲೇ ಒಡಿಶಾ ಸರ್ಕಾರ 1996 ರಿಂದ ಈಚೆಗೆ ಅರಣ್ಯೇತರ ಉದ್ದೇಶಗಳಿಗಾಗಿ ಬಿಡುಗಡೆಯಾದ ಅರಣ್ಯ ಭೂಮಿಯನ್ನು ಅರಣ್ಯದಿಂದ ಕೈಬಿಟ್ಟಿದೆ.ಈ ಸಂಬಂದ ಒಡಿಶಾ ಸರ್ಕಾರದ ಅರಣ್ಯ,ಪರಿಸರ ಮತ್ತು ಹವಾಮಾನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರು ಆದೇಶ ಸಹ ಹೊರಡಿಸಿದ್ದಾರೆ.ಇದೇ ರೀತಿ ಕರ್ನಾಟಕ ರಾಜ್ಯ ಸರ್ಕಾರ ಕೂಡ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಒಡಿಶಾ ಸರ್ಕಾರ ಸೊಪ್ಪಿನ ಬೆಟ್ಟ,ಕಾನು ಕುಮ್ಕಿ, ಡೀಮ್ಡ್ ಫಾರೆಸ್ಟ್ ಕೈಬಿಟ್ಟಿದೆ. ಆದೇ ರೀತಿ ರಾಜ್ಯದಲ್ಲಿಯೂ ಕೈಬಿಡುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದರು.
ʼʼಪ್ರಭಾವಿ ರಾಜಕಾರಣಿಯ ಭೂಮಿ ಡಿನೋಟಿಫಿಕೇಷನ್ʼʼ
ಶಿವಮೊಗ್ಗದ 6-7 ಕಿಮಿ ದೂರದಲ್ಲಿರುವ ಬಿಜೆಪಿ ನಾಯಕರೊಬ್ಬರ ನೂರಾರು ಎಕರೆ ಜಮೀನನ್ನು ಡಿನೋಟಿಫೈ ಮಾಡಲಾಗಿದೆ. ಆದರೆ ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಯನ್ನು ಡಿನೋಟಿಫೈ ಮಾಡಲು ಯಾಕೆ ಸಾಧ್ಯವಿಲ್ಲ. ಕೆಲವು ಅರಣ್ಯಾಧಿಕಾರಿಗಳು ಬೊಮ್ಮಾಯಿ ಸರ್ಕಾರದ ಹ್ಯಾಂಗ್ ಓವರ್ ನಿಂದ ಹೊರಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ದುಗ್ಗಪ್ಪ ಗೌಡ, ಚಂದ್ರಭೂಪಾಲ್, ಮಂಜುನಾಥ ಬಾಬು,ಶೆಟ್ಟಿಕೆರೆ ರಾಜಪ್ಪ,ವಕೀಲರಾದ ಧರ್ಮರಾಜ್ ಮತ್ತು ಮುಳುಗಡೆ ಸಂತ್ರಸ್ತರು ಇದ್ದರು.