ಮತ್ತೊಂದು ಹೊಸ ಬಿಪಿಎಲ್ ಕಾರ್ಡ್ ಜಾರಿಗೆ ಚಿಂತನೆ: ಸಚಿವ ಕೆ.ಎಚ್.ಮುನಿಯಪ್ಪ
ಬೆಂಗಳೂರು, ಜು.26: ‘ರಾಜ್ಯದಲ್ಲಿ ಎರಡು ವಿಧದ ಪಡಿತರ ಚೀಟಿಗಳನ್ನು ಜಾರಿಗೊಳಿಸುವ ಚಿಂತನೆ ಇದ್ದು, ಇದರ ಮೂಲಕ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವುದು ಸುಲಭವಾಗಲಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಂಧ್ರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿ ಎರಡು ವಿಧದ ಪಡಿತರ ಚೀಟಿಗಳನ್ನು ಜಾರಿಗೊಳಿಸುವ ಚಿಂತನೆ ನಡೆದಿದೆ. ಈ ಮೂಲಕ ಒಂದು ಪಡಿತರ ಚೀಟಿ ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಲಿದೆ’ ಎಂದು ಹೇಳಿದರು.
ಅಲ್ಲದೆ, ಬಿಪಿಎಲ್ ಪಡಿತರ ಚೀಟಿದಾರರಲ್ಲಿ ಕೆಲವರು ಆಹಾರ ಧಾನ್ಯ ಪಡೆಯುತ್ತಿಲ್ಲ. ವೈದ್ಯಕೀಯ ಸೇವೆಗಳಲ್ಲಿ ಶುಲ್ಕ ರಿಯಾಯ್ತಿ ಪಡೆಯುವುದಕ್ಕೆ ಸೀಮಿತವಾಗಿ ಪಡಿತರ ಚೀಟಿ ಬಳಸುತ್ತಿದ್ದಾರೆ. ಜತೆಗೆ, ನೆರೆಯ ಆಂಧ್ರಪ್ರದೇಶದಲ್ಲಿ ಆಸಕ್ತರಿಗೆ ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಿ ಬಳಸಬಹುದಾದ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ. ಇದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸುವ ಪ್ರಸ್ತಾವ ಇದೆ ಎಂದು ಅವರು ಮಾಹಿತಿ ನೀಡಿದರು.
ಸದ್ಯ ರಾಜ್ಯ ವ್ಯಾಪಿ 1.28 ಕೋಟಿ ಬಿಪಿಎಲ್ ಪಡಿತರ ಚೀಟಿಗಳಿದ್ದು, ಈ ಪೈಕಿ 97.27 ಲಕ್ಷ ಪಡಿತರ ಚೀಟಿದಾರರ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ಜೋಡಣೆ ಮಾಡಲಾಗಿದೆ. 30.90 ಲಕ್ಷ ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಈ ಮಾಹಿತಿ ಜೋಡಣೆಯಾಗಿಲ್ಲ. ಮೊದಲ ಹಂತದಲ್ಲಿ ಅಗತ್ಯ ಮಾಹಿತಿ ಜೋಡಣೆಯಾಗಿರುವ ಪಡಿತರ ಚೀಟಿದಾರರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಅಕ್ಕಿಯ ಬಾಬ್ತು ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಸಚಿವರು ಉಲ್ಲೇಖಿಸಿದರು.
ಬಿಪಿಎಲ್ ಪಡಿತರ ಚೀಟಿ ಕೋರಿರುವ ಮೂರು ಲಕ್ಷ ಅರ್ಜಿಗಳು ಬಾಕಿ ಇವೆ. ಅವುಗಳನ್ನು ಶೀಘ್ರದಲ್ಲಿ ಪರಿಶೀಲಿಸಿ, ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಭರವಸೆ ನೀಡಿದ ಅವರು, ಈವರೆಗೆ 27 ಜಿಲ್ಲೆಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ 566 ಕೋಟಿ ಪಾವತಿಸಲಾಗಿದೆ. ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿಮತ್ತುವಿಜಯನಗರ ಜಿಲ್ಲೆಗಳಲ್ಲಿಬಾಕಿ ಇದ್ದು, ವಾರದೊಳಗೆ ಎಲ್ಲರ ಖಾತೆಗಳಿಗೂಹಣ ವರ್ಗಾವಣೆಮಾಡಲಾಗುವುದು ಎಂದು ಹೇಳಿದರು.
ಹಣ ಶೀಘ್ರದಲ್ಲೇ ವರ್ಗಾವಣೆ: ಮಾಹಿತಿ ಕೊರತೆ ಇರುವ ಪಡಿತರ ಚೀಟಿದಾರರನ್ನು ಸಂಪರ್ಕಿಸಿ, ಅಗತ್ಯ ಮಾಹಿತಿಗಳನ್ನು ಜೋಡಣೆ ಮಾಡಲಾಗುವುದು. ಎರಡರಿಂದ ಮೂರು ತಿಂಗಳಲ್ಲಿ ಅಂತಹ ಪಡಿತರ ಚೀಟಿದಾರರ ಖಾತೆಗೂ ಎರಡರಿಂದ ಮೂರು ತಿಂಗಳಲ್ಲಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಿಪಿಎಲ್ ಚೀಟಿ ‘ಎ-ಬಿ’ ಎಂದು ವಿಂಗಡಣೆ: ಬಿಪಿಎಲ್ ಚೀಟಿ ಬಯಸುವವರಲ್ಲಿ ಪಡಿತರ ಹಾಗೂ ಆರೋಗ್ಯ ಸೇವೆ ಎರಡನ್ನೂ ಬಯಸುವ ವರ್ಗವಿದೆ. ಇನ್ನೊಂದು ವರ್ಗ ಪಡಿತರ ಪಡೆಯದೆ ಕೇವಲ ಆರೋಗ್ಯ ಸೇವೆಯನ್ನಷ್ಟೇ ಪಡೆಯಲು ಇಚ್ಚಿಸುತ್ತದೆ. ಹೀಗಾಗಿ ಬಿಪಿಎಲ್ ಪಡಿತರಚೀಟಿದಾರರನ್ನು ‘ಎ, ಬಿ’ ಎಂದು ವರ್ಗೀಕರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಮುನಿಯಪ್ಪ ಮಾಹಿತಿ ನೀಡಿದರು.