ರಾಜ್ಯದಲ್ಲಿ ರಂಗೇರಿದ ಉಪಚುನಾವಣೆಯ ಪ್ರಚಾರ; ಅಖಾಡಕ್ಕಿಳಿದ ಮಹಿಳೆಯರು

Update: 2024-11-04 15:27 GMT

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯ ಕಾವು ರಂಗೇರಿದ್ದು, ಎಲ್ಲೆಡೆ ಬಿರುಸಿನ ಪ್ರಚಾರ ಜೋರಾಗಿದೆ. ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣದಲ್ಲಿ ಎನ್‍ಡಿಎ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದ ಅಖಾಡಕ್ಕೆ ಮಹಿಳೆಯರು ಇಳಿದಿದ್ದಾರೆ.

ಈ ಉಪಚುನಾವಣೆಯಲ್ಲಿ ಭಾರೀ ಕುತೂಹಲ ಸೃಷ್ಟಿಸಿರುವ ಕ್ಷೇತ್ರವೆಂದರೆ ಅದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ. ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಈ ಬಾರಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್‍ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನಿಖಿಲ್ ಪರವಾಗಿ ಅವರ ಧರ್ಮಪತ್ನಿ ರೇವತಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.

ಸೋಮವಾರ ಬೆಳಗ್ಗೆಯಿಂದಲೇ ಚನ್ನಪಟ್ಟಣದ ಬಸ್ ನಿಲ್ದಾಣ ಹಾಗೂ ಪದವಿ ಕಾಲೇಜಿನ ಸಮೀಪ ನಿಖಿಲ್ ಪರವಾಗಿ ಪತ್ನಿ ರೇವತಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು, ಪಟ್ಟಣದ ಸಾರ್ವಜನಿಕರನ್ನು ಭೇಟಿಯಾದ ರೇವತಿ, ಕರಪತ್ರಗಳನ್ನು ನೀಡಿ ಎನ್‍ಡಿಎ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.

ಈ ವೇಳೆ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದ ರೇವತಿ ಜೊತೆಗೆ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು. ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಪ್ರೀತಿ ಹಾಗೂ ವಿಶ್ವಾಸಕ್ಕೆ ರೇವತಿ ಸಂತಸ ವ್ಯಕ್ತಪಡಿಸಿದರು. ರೇವತಿ ಅವರೊಂದಿಗೆ ರಾಜ್ಯ ಮಹಿಳಾ ಜನತಾದಳ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಹಾಗೂ ಜೆಡಿಎಸ್ ಮಹಿಳಾ ಘಟಕದ ಅನೇಕರು ಸಾಥ್ ನೀಡಿದರು.

ಇನ್ನು ಸಂಡೂರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನ್ನಪೂರ್ಣ ಅವರು ಭರ್ಜರಿ ಪ್ರಚಾರ ಕೈಗೊಂಡಿದ್ದು, ಸಂಸದ ಈ.ತುಕಾರಾಂ ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಕ್ಷೇತ್ರಾದ್ಯಂತ ಪರ್ಯಟನೆ ನಡೆಸುತ್ತಿದ್ದಾರೆ. ಸೋಮವಾರದ ಪ್ರಚಾರದಲ್ಲಿ ಅನ್ನಪೂರ್ಣ ಅವರೊಂದಿಗೆ ಸ್ಥಳೀಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯಕರ್ತೆರು ಸಾಥ್ ನೀಡಿದರು.

ಮತ್ತೊಂಡೆದೆ ಶಿಗ್ಗಾಂವಿಯಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ್ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪ್ರಚಾರ ಬಿರುಸು ಜೋರಾಗಿದೆ. ಶಿಗ್ಗಾಂವಿಯಲ್ಲೇ ಠಿಕಾಣಿ ಹೂಡಿ ಭರ್ಜರಿ ಪ್ರಚಾರ ನಡೆಸುತ್ತಿರುವ ಸಂಸದ ಬಸವರಾಜ್ ಬೊಮ್ಮಾಯಿ ಪುತ್ರನ ಗೆಲ್ಲಿಸಲು ಪಣತೊಟ್ಟಿದ್ದಾರೆ. ಇವರಿಗೆ ಭರತ್ ಬೊಮ್ಮಾಯಿ ಅವರ ತಾಯಿಯೂ ಪ್ರಚಾರದಲ್ಲಿ ಸಾಥ್ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News