ಕುಮಾರಸ್ವಾಮಿ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ: ಡಿ.ಕೆ. ಶಿವಕುಮಾರ್

Update: 2024-11-04 15:37 GMT

Photo:X/@DKShivakumar

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ, ಈ ಭಾಗದ ಜನರಿಗೆ ಒಂದೇ ಒಂದು ಉತ್ತಮ ಯೋಜನೆ ನೀಡಿಲ್ಲ. ಇಲ್ಲಿನ ಬಡವರಿಗೆ ಸಹಾಯ ಮಾಡಲು ಆಗದ ಅವರು ಈ ಜನರ ಬಳಿ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಸೋಮವಾರ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಗಚಗೆರೆ ಹಾಗೂ ಭೂಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರಸಭೆ ಉದ್ದೇಶಿಸಿ ಅವರು ಮಾತನಾಡಿದರು.

ನಾನು ಹಾಗೂ ಸಿದ್ದರಾಮಯ್ಯ ವಿಧಾನಸಭೆ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದೆವು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ ಸಮಸ್ಯೆಗೆ ಮುಕ್ತಿ ನೀಡಿ ನಿಮ್ಮ ಬದುಕಿನಲ್ಲಿ ಬದಲಾವಣೆ ತರಬೇಕು ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ. ಇಂತಹ ಒಂದೇ ಒಂದು ಯೋಜನೆಯನ್ನು ನೀಡದ ಕುಮಾರಣ್ಣ ಇಲ್ಲಿ ಬಂದು ಮತ ಕೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು.

ನಿನ್ನನ್ನು ನಂಬಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಚನ್ನಪಟ್ಟಣದ ಜನರನ್ನು ಕೈಬಿಟ್ಟು ಮಂಡ್ಯಕ್ಕೆ ಹೋಗಿದ್ದೀಯ. ಈಗ ಮತ್ತೆ ಬಂದು ಮತ ಕೇಳುತ್ತಿದ್ದೀಯಲ್ಲ? ಎಂದು ಟೀಕಿಸಿದ ಅವರು, ಕುಮಾರಸ್ವಾಮಿ ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಒಂದೇ ಒಂದು ದಿನ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಿಲ್ಲ, ಕನ್ನಡ ಧ್ವಜ ಹಾರಿಸಲಿಲ್ಲ. ಅಲ್ಲಿಗೆ ನಿನ್ನ ಹಾಗೂ ಈ ಚನ್ನಪಟ್ಟಣ ಕ್ಷೇತ್ರದ ಜನರ ನಡುವೆ ಭಾವನಾತ್ಮಕ ಸಂಬಂಧ ಎಲ್ಲಿದೆ? ಎಂದು ಅವರು ಹರಿಹಾಯ್ದರು.

ಈ ಕ್ಷೇತ್ರದಲ್ಲಿ ಅನೇಕ ಜನರು ಬಗರ್ ಹುಕ್ಕುಂ ಸಾಗುವಳಿಗೆ ಅರ್ಜಿ ಹಾಕಿದ್ದೀರಿ. ಅನೇಕರು ನಿವೇಶನ, ಮನೆಯಿಲ್ಲ ಎಂದು ಅರ್ಜಿ ಹಾಕಿದ್ದೀರಿ. ನಾನು ಇಲ್ಲಿ ಭೇಟಿ ಮಾಡಿ ನಿಮ್ಮ ಅರ್ಜಿ ನೋಡಿದ ಬಳಿಕ ಈ ಭಾಗದಲ್ಲಿ ನೂರಾರು ಎಕರೆ ಜಮೀನು ಖರೀದಿ ಮಾಡಿ ನಿವೇಶನ ಹಂಚಲಾಗುತ್ತಿದೆ. 5 ಸಾವಿರ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿಸಿದ್ದೇನೆ. ಈ ಕೆಲಸ ಕುಮಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿರಲಿಲ್ಲವೇ? ಎಂದು ಉಪ ಮುಖ್ಯಮಂತ್ರಿ ಟೀಕಿಸಿದರು.

ಯೋಗೇಶ್ವರ್ ಮೂರ್ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಕಳೆದ 2 ಬಾರಿ ಇದೇ ಕ್ಷೇತ್ರದಲ್ಲಿ ಸೋತಿದ್ದಾರೆ. ಈ ಎರಡು ಅವಧಿಯಲ್ಲಿ ನೀವು ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ್ದೀರಿ. ಕುಮಾರಸ್ವಾಮಿ ಶಾಸಕರಾಗಿ ಮುಖ್ಯಮಂತ್ರಿಯಾಗಿದ್ದರು. ಪಕ್ಕದ ಕ್ಷೇತ್ರದಿಂದಲೂ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ರಾಮನಗರದಲ್ಲಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ಬಳಿಕ ಈ ಕ್ಷೇತ್ರದಲ್ಲಿ ಶಾಸಕ ಸ್ಥಾನ ಖಾಲಿಯಾಯಿತು. ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ರಾಜ್ಯದ ಉಪಮುಖ್ಯಮಂತ್ರಿಯಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿದೆ. 26 ಸಾವಿರ ಜನ ನನಗೆ ಅರ್ಜಿ ತಂದು ಪಿಂಚಣಿ, ಸಾಲ ಸೌಲಭ್ಯ, ಮನೆ, ನಿವೇಶನಕ್ಕೆ ಮನವಿ ಮಾಡಿದಿರಿ. ನಾನು ಸುಮಾರು 20ಕ್ಕೂ ಹೆಚ್ಚು ಬಾರಿ ಕ್ಷೇತ್ರಕ್ಕೆ ಬಂದು ಸಭೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಇಕ್ಬಾಲ್ ಹುಸೇನ್ ವಿರುದ್ಧ ಕಣಕ್ಕಿಳಿಸಿದರು. ಜನ ಉಪಕಾರ ಮಾಡಿದವರನ್ನು ಸ್ಮರಿಸುತ್ತಾರೆ. ಕುಮಾರಣ್ಣ ಹಾಗೂ ಅನಿತಕ್ಕ ರಾಮನಗರದಲ್ಲಿ ಕೆಲಸ ಮಾಡಿದ್ದೇ ಆಗಿದ್ದರೆ, ನಿಖಿಲ್ ಯಾಕೆ ಸೋಲುತ್ತಿದ್ದರು? ಎಂದು ಶಿವಕುಮಾರ್ ಪ್ರಶ್ನಿಸಿದರು.

ನಾವು ಯೋಗೇಶ್ವರ್ ಅವರಿಗೆ ಕರೆದು ಟಿಕೆಟ್ ಕೊಟ್ಟಿದ್ದೇವೆ. ಅವರು ಕಾಂಗ್ರೆಸ್ ಸರಕಾರದ ಜತೆ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದ್ದಾರೆ. ನಾವು ಮನೆಗೆ ಉಚಿತ ವಿದ್ಯುತ್ ನೀಡಿದ್ದೇವೆ. ಯೋಗೇಶ್ವರ್ ಕೆರೆಗಳಿಗೆ ನೀರು ತುಂಬಿಸಿದ್ದಾರೆ. ನಾನು ಈ ಭಾಗದ ರೈತರಿಗೆ ವಿದ್ಯುತ್ ಟಿಸಿಗಳನ್ನು ಹಾಕಿಸಿದ್ದೇನೆ. ಇಂತಹ ಒಂದು ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರಾ? ಎಂದು ಉಪ ಮುಖ್ಯಮಂತ್ರಿ ಪ್ರಶ್ನಿಸಿದರು.

ಚನ್ನಪಟ್ಟಣದಲ್ಲಿ ಅಭಿವೃದ್ಧಿ ಪರ್ವ ಮಾಡಿಯೇ ಮಾಡುತ್ತೇವೆ. ಯೋಗೇಶ್ವರ್ ಅವರನ್ನು ವಿಧಾನಸೌಧಕ್ಕೆ ಕಳುಹಿಸಿ ನಿಮ್ಮ ಸೇವೆಗೆ ನಮ್ಮನ್ನು ಉಪಯೋಗಿಸಿಕೊಳ್ಳಿ. ಬೇರೆ ಪಕ್ಷದ ಕಾರ್ಯಕರ್ತರು ದಳದಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಕುಮಾರಣ್ಣ ದಳವನ್ನು ಕೈಬಿಟ್ಟಾಯ್ತು. ಹೀಗಾಗಿ ಆ ಪಕ್ಷದ ಕಾರ್ಯಕರ್ತರು ನಮ್ಮ ಜತೆ ಕೈಜೋಡಿಸಿ ಎಂದು ಶಿವಕುಮಾರ್ ಕರೆ ನೀಡಿದರು.

ನಮ್ಮ ಸರಕಾರ ಮಡಕೆಯಲ್ಲ: ನಮ್ಮ ಸರಕಾರ ಮುಂದಿನ ಮೂರುವರೆ ವರ್ಷ ಮಾತ್ರವಲ್ಲ. ಆನಂತರದ ಐದು ವರ್ಷಗಳ ಅವಧಿಗೂ ಆಡಳಿತ ನಡೆಸಲಿದೆ. ಬಿಸಾಕಿದ ತಕ್ಷಣ ಒಡೆಯಲು ನಮ್ಮ ಸರಕಾರ ಮಡಕೆಯಲ್ಲ. ಕನಕಪುರದ ಜನ ಹೇಗೆ ನನನ್ನು 1.23 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದರೋ ಅದೇ ರೀತಿ ಯೋಗೇಶ್ವರ್ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿಕೊಳ್ಳಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.

ನೀವು ಇಲ್ಲಿ ಮತ ಹಾಕುವಾಗ ಬರುವ ಶಬ್ಧ ದಿಲ್ಲಿಯಲಿ ಕುಮಾರಸ್ವಾಮಿಗೆ ಕೇಳಿಸಬೇಕು. ನಾನು ಇಲ್ಲಿ ಉದ್ಯೋಗ ಮೇಳ ಮಾಡಿದ ನಂತರ ಕುಮಾರಸ್ವಾಮಿ ಮಂಡ್ಯದಲ್ಲಿ ಉದ್ಯೋಗ ಮೇಳ ಮಾಡಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ ಅದೇ ಕೆಲಸವನ್ನು ಚನ್ನಪಟ್ಟಣದಲ್ಲಿ ಯಾಕೆ ಮಾಡಲಿಲ್ಲ? ಇಲ್ಲಿನ ಯುವಕರಿಗೆ ಉದ್ಯೋಗ ಕೊಡಿಸಬಹುದಿತ್ತಲ್ಲವೇ? ಈ ಜನರಿಗೆ ಸಹಾಯ ಮಾಡುವ ಮನೋಭಾವ ನಿಮಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಿಖಿಲ್ ಬಗ್ಗೆ ಮಾತನಾಡುವುದಿಲ್ಲ:

‘ನಾನು ಕುಮಾರಸ್ವಾಮಿ ಪುತ್ರ ನಿಖಿಲ್ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಪಾಪ ಕಂದ. ಅವರು ಇಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ, ಅಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ. ಕಣ್ಣೀರು ಹಾಕು ಎಂದರೂ ಹಾಕುತ್ತಾನೆ, ನಗು ಎಂದರೂ ನಗುತ್ತಾನೆ. ಆತನನ್ನು ನಾನು ಪ್ರಶ್ನೆ ಮಾಡುವುದಿಲ್ಲ. ಆತ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದಾಗಿ ಹೇಳಿದ್ದಾರೆ. ಅವರು ಒತ್ತಡಕ್ಕೆ ಸ್ಪರ್ಧಿಸಿದ್ದಾರೆಯೇ ಹೊರತು, ಜನರ ಸೇವೆಗಾಗಿ ಅಲ್ಲ. ನಿಮ್ಮ ಕಷ್ಟ ಸುಖಕ್ಕೆ ಭಾಗಿಯಾಗಲು ನಾವು ಸಂಕಲ್ಪ ಮಾಡಿದ್ದೇವೆ’

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News