ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅನ್ವರ್ ಬಾಷ ಆಯ್ಕೆ

Update: 2023-09-04 14:46 GMT

ಬೆಂಗಳೂರು, ಸೆ.4: ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ರಾಜೀನಾಮೆಯಿಂದ ತೆರವಾಗಿರುವ ರಾಜ್ಯ ವಕ್ಫ್ ಬೋರ್ಡ್‍ನ ಅಧ್ಯಕ್ಷ ಸ್ಥಾನಕ್ಕೆ ಅನ್ವರ್ ಬಾಷ ನಿಯೋಜಿತಗೊಂಡಿದ್ದಾರೆ. ಸೋಮವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅನ್ವರ್ ಬಾಷ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು.

ಚಿತ್ರದುರ್ಗ ಜಿಲ್ಲೆಯವರಾದ ಅನ್ವರ್ ಬಾಷ, ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದಾರೆ. ಅಲ್ಲದೆ, ವೆಸ್ಟ್ರನ್ ಹಿಲ್ಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. 2020ರಲ್ಲಿ ವಕ್ಫ್ ಬೋರ್ಡ್‍ಗೆ ನಡೆದ ಚುನಾವಣೆಯಲ್ಲಿ ಮುತವಲ್ಲಿ ವಿಭಾಗದಿಂದ ಮೊದಲ ಬಾರಿ ಚುನಾಯಿತರಾದರು. ಮೂರು ಬಾರಿ ಚಿತ್ರದುರ್ಗ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ವಿದ್ಯಾರ್ಥಿ ದೆಸೆಯಿಂದಲೂ ಸಕ್ರಿಯವಾಗಿರುವ ಅನ್ವರ್ ಬಾಷ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಅಭಿನಂದನೆ: ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಅನ್ವರ್ ಬಾಷ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ರಾಜ್ಯಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಸೈಯದ್ ನಾಸಿರ್ ಹುಸೇನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ತನ್ವೀರ್ ಸೇಠ್, ಎನ್.ಎ.ಹಾರಿಸ್, ರಿಝ್ವಾನ್ ಅರ್ಶದ್ ಸೇರಿದಂತೆ ಇನ್ನಿತರರು ಅಭಿನಂದನೆ ಸಲ್ಲಿಸಿದರು.

ʼನ್ಯಾಯಾಲಯದ ತೀರ್ಪಿನಂತೆ ಫಲಿತಾಂಶ ಪ್ರಕಟʼ

‘ನ್ಯಾಯಾಲಯವು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಆದರೆ, ಫಲಿತಾಂಶ ಪ್ರಕಟ ಮಾಡಬಾರದು ಎಂದು ತಿಳಿಸಿದೆ. ಅದರಂತೆ, ನಾವು ಚುನಾವಣೆಯ ಪ್ರಕ್ರಿಯೆ ಮುಗಿಸಿದ್ದೇವೆ. ನಾಳೆ(ಸೆ.5) ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರಲಿದ್ದು, ಸರಕಾರದ ವತಿಯಿಂದ ನಮ್ಮ ಅಡ್ವೊಕೇಟ್ ಜನರಲ್ ವಿಚಾರಣೆಗೆ ಹಾಜರಾಗುತ್ತಾರೆ. ನಮ್ಮ ಸಮುದಾಯದ ಜನಪ್ರತಿನಿಧಿಗಳು ಎಲ್ಲರೂ ಚರ್ಚೆ ಮಾಡಿ, ಅಧ್ಯಕ್ಷ ಸ್ಥಾನಕ್ಕೆ ನಾನೊಬ್ಬನೆ ನಾಮಪತ್ರ ಸಲ್ಲಿಸಲು ಸೂಚಿಸಿದ್ದರು. ಅದರಂತೆ, ನಾನು ಒಬ್ಬನೆ ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ನ್ಯಾಯಾಲಯದ ತೀರ್ಪಿನಂತೆ ಫಲಿತಾಂಶ ಪ್ರಕಟವಾಗಲಿದೆ’

-ಅನ್ವರ್ ಬಾಷ, ನಿಯೋಜಿತ ಅಧ್ಯಕ್ಷ, ವಕ್ಫ್ ಬೋರ್ಡ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News