ನಾವು ವಿಜಯೇಂದ್ರ ನಾಯಕತ್ವ ಒಪ್ಪುವುದಿಲ್ಲ: ರಮೇಶ್ ಜಾರಕಿಹೊಳಿ

Update: 2025-01-15 13:44 GMT

ರಮೇಶ್ ಜಾರಕಿಹೊಳಿ

ಬೆಳಗಾವಿ : ‘ಬಿಜೆಪಿ ನಾಯಕತ್ವವನ್ನು ನಾನು ಒಪ್ಪುತ್ತೇನೆ. ಆದರೆ, ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವವನ್ನು ಒಪುವುದಿಲ್ಲ’ ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು. ‘ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ನಾವು ಹೋರಾಡುತ್ತಿರುವುದು ನಿಜ. ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಯಡಿಯೂರಪ್ಪ ಬಗ್ಗೆ ಗೌರವವಿದೆ. ಅವರ ರಾಜ್ಯ ಪ್ರವಾಸಕ್ಕೆ ನಮ್ಮ ಸ್ವಾಗತ. ಆದರೆ, ಇದು ಮಗನ ಸ್ಥಾನ ಭದ್ರಪಡಿಸಲೋ ಅಥವಾ ಪಕ್ಷವನ್ನು ಭದ್ರಪಡಿಸಲೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಪದೇ ಪದೆ ಹೈಕಮಾಂಡ್ ಬ್ಲಾಕ್‍ಮೇಲ್ ಮಾಡಬೇಡಿ. ನಿಮಗೆ ವಯಸ್ಸಾಗಿದೆ, ಜೀವನದ ಕೊನೆ ಹಂತದಲ್ಲಿ ಇದ್ದಿರಿ. ಪಕ್ಷ ನಿಮಗೆ ಎಲ್ಲವನ್ನೂ ಕೊಟ್ಟಿದೆ. ವಿಜಯೇಂದ್ರನ ಬೆನ್ನು ಹತ್ತಿದರೆ ನೀವು ಹಾಳಾಗುತ್ತಿರಿ. ದಯವಿಟ್ಟು ಪುತ್ರ ಎಂದು ನೋಡಬೇಡಿ. ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟು ಹೊಸ ಅಧ್ಯಕ್ಷರನ್ನು ಮಾಡಲು ನೀವು ಸಹಕಾರ ಕೊಡಬೇಕು’ ಎಂದು ರಮೇಶ್ ಜಾರಕಿಹೊಳಿ, ಬಿಎಸ್‍ವೈಗೆ ಮನವಿ ಮಾಡಿದರು.

ಸಿ.ಟಿ.ರವಿ ಮಾತಿಗೆ ಆಕ್ಷೇಪ: ‘ಸಿ.ಟಿ.ರವಿ ಪರಿಷತ್‍ನಲ್ಲಿ ಬಳಕೆ ಮಾಡಿರುವ ಪದಕ್ಕೆ ನನ್ನ ತಕರಾರು ಇದೆ. ಆದರೆ, ಅವರು ನಾನು ಆ ರೀತಿ ಮಾತನಾಡಿಲ್ಲ ಎಂದಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಬಗ್ಗೆ ಸಿ.ಎಂ.ಇಬ್ರಾಹೀಂ ಏನು ಮಾತಾಡಿದ್ದರು ಎಂದು ಗೊತ್ತಿದೆ. ರಾಜಕಾರಣದಲ್ಲಿ ಇಂತಹ ವಿಚಾರಗಳನ್ನು ದೊಡ್ಡದು ಮಾಡಬಾರದಿತ್ತು. ರಾಜಕಾರಣದಲ್ಲಿ ಯಾರೂ ಶುದ್ಧರಲ್ಲ. ಬಾಯಿತಪ್ಪಿ ಆ ರೀತಿ ಮಾತಾಡಿರುತ್ತಾರೆ. ಅದನ್ನು ಅಲ್ಲಿಯೇ ಮುಗಿಸಬೇಕಿತ್ತು ಎಂದರು.

ಪಕ್ಷವನ್ನು ನಾವು ಗಟ್ಟಿ ಮಾಡಿ, ಪೂರ್ಣ ಪ್ರಮಾಣದಲ್ಲಿ 130-140 ಸ್ಥಾನ ಗೆಲ್ಲಲು ಕೆಲಸ ಮಾಡುತ್ತಿದ್ದೇವೆ. 2028ಕ್ಕೆ ಆಗುತ್ತದೆಯೋ ಅಥವಾ ಅದಕ್ಕಿಂತ ಮೊದಲು ಚುನಾವಣೆ ಆಗುತ್ತದೆಯೋ ಗೊತ್ತಿಲ್ಲ ಎಂದ ಅವರು, ಸರಕಾರ ಬೀಳಲು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದ್ದು ನಿಜ. ನಿನ್ನೆಯಿಂದ ಅದು ಶುರುವಾಗಿದೆ ಎಂದರು.

ಸತೀಶ್ ಸೈಲೆಂಟ್ ಆಗಿರಬಾರದು: ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸತೀಶ ಜಾರಕಿಹೊಳಿ ಸೈಲೆಂಟ್ ಆಗಿ ಇರಬಾರದು. ಉಗ್ರವಾಗಿ ವರ್ತಿಸಿದರೆ ಮಾತ್ರ ಅವರಿಗೆ ಉಳಿಗಾಲ. ಇಲ್ಲದಿದ್ದರೆ ಅವರನ್ನು ರಾಜಕೀಯವಾಗಿ ಮುಗಿಸುತ್ತಾರೆ ಎಂದು ರಮೇಶ್ ಜಾರಕಿಹೊಳಿ, ಸಹೋದರ ಸತೀಶ್ ಜಾರಕಿಹೊಳಿಗೆ ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News