ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗತಿ ತಿಳಿಯಲು ರಾಷ್ಟ್ರೀಯ ಜಾತಿಗಣತಿ ನಡೆಸಿ : ಡಾ.ಬಂಜಗೆರೆ ಜಯಪ್ರಕಾಶ್

Update: 2025-01-15 16:34 GMT

ಬೆಂಗಳೂರು : ಭಾರತದಂತಹ ಜಾತಿಯ ದೇಶದಲ್ಲಿ ಜಾತಿಗಳ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅರಿಯಲು ರಾಷ್ಟ್ರೀಯ ಜಾತಿಗಣತಿ ಮುಖ್ಯವಾಗಿದ್ದು, ಜಾತಿಗಣತಿ ಮಾಡದೇ ಜಾತಿಪ್ರಾತಿನಿಧ್ಯ ಒದಗಿಸುವುದು ಸಾಧ್ಯವಿಲ್ಲ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ಬುಧವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ 1931ರಲ್ಲಿ ಬ್ರಿಟೀಷರಿಂದ ಜಾತಿಗಣತಿ ನಡೆದಿದ್ದು, ಅದೇ ದತ್ತಾಂಶದ ಆಧಾರದಲ್ಲಿ ಈಗ ಸರಕಾರ ಸವಲತ್ತು ಕೊಡುತ್ತಿದೆ. ಆದರೆ 1931ರ ನಂತರ ಇಷ್ಟು ವರ್ಷಗಳು ಕಳೆದರೂ ಕೇಂದ್ರ ಸರಕಾರ ಜಾತಿಗಣತಿ ನಡೆಸಲು ಇನ್ನೂ ನಿರ್ಧರಿಸಿಲ್ಲ ಎಂದು ಅವರು ಹೇಳಿದರು.

ವಾಸ್ತವವಾಗಿ ನಮ್ಮ ಸಂವಿಧಾನವೇ ಜಾತಿ ಗುಂಪುಗಳಿಗೆ ಸವಲತ್ತು ನೀಡುತ್ತಿದೆ. ಯಾವ ಆಧಾರದಲ್ಲಿ ಸವಲತ್ತುಗಳನ್ನು ನೀಡುತ್ತಿದ್ದೀರ ಎಂದು ಸುಪ್ರೀಂ ಕೋರ್ಟ್ ಜಾತಿ ದತ್ತಾಂಶಗಳನ್ನು ಕೇಳಿದೆ. ಆದರೂ ಸರಕಾರಗಳು ಕ್ರಮ ತೆಗೆದುಕೊಂಡಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಪ್ರತ್ಯೇಕವಾಗಿ ಜಾತಿಗಣತಿ ನಡೆಸಿದ್ದರು. ಅದನ್ನು ನರೇಗಾ ಮತ್ತು ಬಿಪಿಎಲ್ ಯೋಜನೆ ಜಾರಿಗೆ ಬಳಸಿದ್ದರು. ಆದರೆ, ಆ ಮಾಹಿತಿಯನ್ನು ಈಗ ಬಹಿರಂಗಪಡಿಸಿಲ್ಲ ಎಂದು ಅವರು ಹೇಳಿದರು.

2015ರಲ್ಲಿ ಸಿದ್ದರಾಮಯ್ಯ ಸರಕಾರ ಕಾಂತರಾಜು ಆಯೋಗದ ಮೂಲಕ ವರದಿಯನ್ನು ಸಿದ್ಧಪಡಿಸಿತ್ತು. ಆದರೆ ಈಗ ಅದಕ್ಕೆ 10 ವರ್ಷ ಕಳೆದು ಹೋಗಿದೆ. ಆ ವರದಿಯನ್ನು ಈಗ ಅಧಿಕೃತ ಎಂದು ಬಳಸಲು ಸಾಧ್ಯವಿಲ್ಲ. ಆದುದರಿಂದ ಕೇಂದ್ರ ಸರಕಾರದಿಂದ ಜನಗಣತಿ ಬಾಕಿ ಇದ್ದು, ಕೇಂದ್ರ ಸರಕಾರವೇ ಈಗ ಉಪಜಾತಿಗಳ ಸಹಿತ ಜಾತಿಗಣತಿ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಆರ್ಥಿಕತಜ್ಞ ಡಾ. ಕೃಷ್ಣ ರಾಜ್ ಮಾತನಾಡಿ, ನಮ್ಮ ಸಂವಿಧಾನ ಹೇಳುವಂತೆ ಎಲ್ಲರನ್ನು ಒಳಗೊಂಡ ಅಭಿವೃದ್ಧಿ 75 ವರ್ಷಗಳಲ್ಲಿ ಸಾಧ್ಯವಾಗಿಲ್ಲ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಜಾತಿಗಣತಿ ಅನಿವಾರ್ಯವಾಗಿದೆ. ದಲಿತರು, ಆದಿವಾಸಿಗಳು, ಮಹಿಳೆಯರು ಇವರೆಲ್ಲರನ್ನು ಒಳಗೊಂಡಾಗಲೇ ಅಭಿವೃದ್ಧಿಗೆ ಒಂದು ಅರ್ಥ ಬರುತ್ತದೆ. ಕೇಂದ್ರ ಸರಕಾರ ವಿಕಸಿತ ಭಾರತದ ಕುರಿತು ಮಾತನಾಡುತ್ತಿದೆ. ಆದರೆ ಈ ವಿಕಸಿತ ಭಾರತವನ್ನು ಯಾರಿಗಾಗಿ ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಲೋಹಿಯ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಮಾತನಾಡಿ, ಕೇಂದ್ರ ಸರಕಾರ 2025ನೆ ಸಾಲಿನಲ್ಲಿ ರಾಷ್ಟ್ರೀಯ ಜನಗಣತಿ ನಡೆಸುವುದಾಗಿ ಘೋಷಿಸಿದೆ. ಈ ಜನಗಣತಿ ಜೊತೆಗೆ ಜಾತಿ ಗಣತಿಯನ್ನು ನಡೆಸಬೇಕು, ಈ ಮೂಲಕ ಎಲ್ಲ ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು, ಉಭಯ ಸದನಗಳಲ್ಲಿಯೂ ಈ ನಿರ್ಣಯವನ್ನು ಅಂಗೀಕರಿಸುವ ಮೂಲಕ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದರು.

ಎಚ್. ಕಾಂತರಾಜ್ ನೇತೃತ್ವದ ಆಯೋಗದ ಜಾತಿಗಣತಿ ವರದಿಯು ಸುಮಾರು ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ದತ್ತಾಂಶ ಪ್ರಸ್ತುತ ಜನಸಂಖ್ಯೆಗೆ ಅಪ್ರಸ್ತುತವಾಗಿದೆ. ಇದೇ ವೇಳೆ, ಕೇಂದ್ರ ಸರಕಾರ ಜನಗಣತಿಗೆ ಸಜ್ಜಾಗಿದೆ. ಈ ಗಣತಿಯನ್ನು ರಾಷ್ಟ್ರೀಯ ಜಾತಿಗಣತಿಯಾಗಿ ಪರಿವರ್ತಿಸುವುದೇ ಈಗಿನ ಸಮಸ್ಯೆಗೆ ಸೂಕ್ತ ಪರಿಹಾರವಾಗುತ್ತದೆ ಎಂದು ಅವರು ವಿವರಿಸಿದರು.

ಹಿಂದುಳಿದ ಸಮುದಾಯಗಳ ಪರಿಸ್ಥಿತಿ ಶೋಚನೀಯವಾಗಿದ್ದು, ಈ ವರ್ಗಗಳ ಮುಕ್ಕಾಲು ಪಾಲು ಜನರು ಪ್ರೌಢಶಿಕ್ಷಣ ಪಡೆದುಕೊಳ್ಳಲಾಗಿಲ್ಲ. ಹಿಂದುಳಿದ ಸಮುದಾಯಕ್ಕೆ ಸೇರಿದ ಜಾತಿಗಳು ಒಟ್ಟು ಜನಸಂಖ್ಯೆಯ ಶೇಕಡಾ 54ರಷ್ಟಿದ್ದರೂ, ಅವುಗಳಿಗೆ ರಾಜಕೀಯ ಪ್ರಾತಿನಿಧ್ಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗಬೇಕಾದ ಅವಕಾಶ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ಫಾತಿಮ ಉಪಸ್ಥಿತರಿದ್ದರು.

‘ಒಳ ಮೀಸಲಾತಿ ನೀಡಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದೆ. ಅಲ್ಲದೆ ಕೆಲವರು ಪ್ರವರ್ಗ 2(ಎ)ನಲ್ಲಿ ಕೆಲ ಜಾತಿಗಳನ್ನು ಸೇರ್ಪಡೆ ಮಾಡಲು ಒತ್ತಾಯಿಸುತ್ತಿದ್ದಾರೆ. ಮೀಸಲಾತಿ ನೀಡುವ ಸಂಬಂಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇವೆ. ಹೀಗಾಗಿ ನ್ಯಾಯಾಲಯಗಳ ಮುಂದೆ ಸರಕಾರಕ್ಕೆ ಉತ್ತರ ಕೊಡಲು ಜಾತಿ ಸಮೀಕ್ಷೆ ಅನುಕೂಲ ಆಗುತ್ತದೆ. ಇಷ್ಟಲ್ಲಾ ಗೊತ್ತಿದ್ದರೂ ಕೇಂದ್ರ ಸರಕಾರ ಜಾತಿಗಣತಿ ನಡೆಸಲು ಹಿಂದೇಟು ಹಾಕುತ್ತಿರುವುದಾದರೂ ಏಕೆ?’

-ಡಾ.ಬಂಜಗೆರೆ ಜಯಪ್ರಕಾಶ್, ಚಿಂತಕ

ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ರಾಷ್ಟ್ರೀಯ ಜನಗಣತಿ 2021ರಲ್ಲಿ ನಡೆಯಬೇಕಾಗಿತ್ತು. ಕೋವಿಡ್-19 ಸಾಂಕ್ರಾಮಿಕದ ಕಾರಣ ನಡೆಸಲಾಗಲಿಲ್ಲ. ಇದನ್ನು 2025ರಲ್ಲಿ ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಈ ಜನಗಣತಿಯಲ್ಲಿ ಜಾತಿ ಕಲಂ ಸೇರಿಸಿ, ದೇಶಾದ್ಯಂತ ಎಲ್ಲ ಜಾತಿ, ಉಪಜಾತಿಗಳ ಸಮಗ್ರ ಸಮೀಕ್ಷೆ ನಡೆಸಬೇಕು. ಇದನ್ನು ಸಾಧಿಸಲು ಪ್ರತಿ ಜಿಲ್ಲೆಯಲ್ಲಿ ಜಾತಿ ಜನಗಣತಿ ಜಾಥಾ ಆಯೋಜಿಸಲು ನಿರ್ಧರಿಸಲಾಗಿದೆ.

-ಬಿ.ಎಸ್.ಶಿವಣ್ಣ, ಲೋಹಿಯ ವಿಚಾರ ವೇದಿಕೆ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News