ಮತ್ತೋರ್ವ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು

Update: 2025-01-15 15:24 GMT

ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‍

ಬೆಂಗಳೂರು: ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ದೂರು ನೀಡಿದರು ಸಹ ದೂರಿಗೆ ಸ್ಪಂದಿಸದೆ ಅಕ್ರಮ, ವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ.

ಬುಧವಾರ ಈ ಕುರಿತು ದೂರು ಸಲ್ಲಿಕೆ ಮಾಡಿರುವ ದಿನೇಶ್ ಕಲ್ಲಹಳ್ಳಿ, ಇಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಸರ್ವೆ ಸಂಖ್ಯೆ 150ರಲ್ಲಿ ಚೆನ್ನವೀರಯ್ಯ ಎನ್ನುವವರಿಗೆ ಎರಡು ಎಕರೆ ಸಾಗುವಳಿದಾರರಿಗೆ ಸರಕಾರಿ ಜಮೀನನ್ನು ಸಾಗುವಳಿ ಮತ್ತು ಹಂಗಾಮಿ ಸಾಗುವಳಿ ಚೀಟಿಯನ್ನು ಮಂಜೂರು ಮಾಡಲಾಗಿದೆ. ಆದರೆ ಜಮೀನು ವ್ಯವಹಾರ ನಡೆದಿದ್ದು, ಸರ್ವೆ ನಂಬರ್ 150ರಲ್ಲಿರುವ ಜಮೀನು ಪೋಡಿ, ನಕ್ಷೆ ಆಗದೇ ಸಾಗುವಳಿದಾರರು ಅಕ್ರಮವಾಗಿ ಜಮೀನನ್ನು ಪಲ್ಟಿತ್ ಡೆವಲಪರ್ಸ್ ಎಲ್‍ಎಲ್‍ಪಿ ಕಂಪೆನಿಗೆ ಮಾರಾಟ ಮಾಡಿರುವುದಾಗಿ ಆರೋಪಿಸಿದ್ದಾರೆ.

ಸರಕಾರದಿಂದ ಮಂಜೂರಾದ ಜಮೀನನ್ನು ಪೋಡಿ, ದುರಸ್ತಿ ಮಾಡದೇ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳು ಪಲ್ಟಿತ್ ಡೆವಲಪರ್ಸ್ ಜೊತೆಗೆ ನೇರವಾಗಿ ಭಾಗಿಯಾಗಿ ಭ್ರಷ್ಟಾಚಾರ ಎಸಗಿರುವ ಇವರ ವಿರುದ್ಧ ಕೂಡ ಕಾನೂನು ಕ್ರಮಕೈಗೊಂಡು ಸರಕಾರಿ ಜಮೀನನ್ನು ರಕ್ಷಿಸಬೇಕಿದೆ. ಇನ್ನೂ, ಈ ಪ್ರಕರಣದಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದರೆ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ ಜಮೀನುಗಳು ಸರಕಾರಿ ಗೋಮಾಳ ಆಗಿದ್ದು, ಈ ಜಮೀನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ ಆಶಿಸ್ತಿನಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ ಬಿಗಿ ಕ್ರಮಗಳನ್ನು ಕೈಗೊಳ್ಳದ ಸಚಿವ ಕೃಷ್ಣಬೈರೇಗೌಡ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ದೂರು ನೀಡಿದರು ಸಹ ದೂರಿಗೆ ಸ್ಪಂದಿಸದೆ ಅಕ್ರಮ, ವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದು, ಹಗರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡುವಂತೆ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‍ಗೆ ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News