ಘರ್ಜಿಸುವ ಹುಲಿಗಳನ್ನೆ ʼಟಾರ್ಗೆಟ್ʼ ಮಾಡಲಾಗುತ್ತದೆ: ‘ಹನಿಟ್ರ್ಯಾಪ್’ ಪ್ರಕರಣದ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಘರ್ಜಿಸುವ ಹುಲಿಗಳನ್ನೆ ಯಾವಾಗಲೂ ಟಾರ್ಗೆಟ್ ಮಾಡಲಾಗುತ್ತದೆ. ‘ಹನಿಟ್ರ್ಯಾಪ್’ ವಿಷಯದಲ್ಲೂ ಅದೇ ರೀತಿ ಆಗುತ್ತಿದೆ. ಸಿ.ಡಿ.ಗಳನ್ನು ತೋರಿಸಿ ಹೆದರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಶನಿವಾರ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್.ರಾಜಣ್ಣ ದೂರು ಕೊಟ್ಟ ನಂತರ ಮುಂದಿನ ತನಿಖೆ ಆಗಲಿದೆ. ಹೈಕಮಾಂಡ್ ಈ ಗಂಭೀರ ವಿಚಾರದ ಕುರಿತು ಸ್ವಯಂಪ್ರೇರಿತವಾಗಿ ವರದಿ ತರಿಸಿಕೊಳ್ಳಬೇಕು ಎಂದು ಹೇಳಿದರು.
ರಾಜಣ್ಣ ನನ್ನ ಜೊತೆ ಅಲ್ಲ ವಕೀಲರು, ತಜ್ಞರ ಜೊತೆಗೆ ಚರ್ಚೆ ಮಾಡಿ ದೂರು ಕೊಡಬೇಕು. ದೂರು ಕೊಡಲು ಅವರಿಗೆ ನಾನೇ ಸಲಹೆ ನೀಡಿದ್ದು. ಯಾಕೆಂದರೆ, ಈ ಪ್ರಕರಣದ ಸೂತ್ರಧಾರಿ ಯಾರು ಎಂಬುದು ಹೊರಗೆ ಬರಲೇಬೇಕು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಈ ಪ್ರಕರಣದಲ್ಲಿ ಹಿಟ್ ಆಂಡ್ ರನ್ ಪ್ರಶ್ನೆಯೇ ಇಲ್ಲ ಎಂದು ರಾಜಣ್ಣ ಹೇಳಿದ್ದಾರೆ. ಇದರ ಹಿಂದೆ ಸ್ವಪಕ್ಷೀಯರು ಇರಬಹುದು ಅಥವಾ ಬೇರೆ ಪಕ್ಷದವರು ಇರಬಹುದು. ಯಾರಿದ್ದಾರೋ ಅದು ಗೊತ್ತಾಗಬೇಕು. ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ಕುರಿತು ಹೀಗೆಯೆ ಚರ್ಚೆಯಾಯಿತು, ತನಿಖೆಯಾಯಿತು. ಆದರೆ ಇದನ್ನೆಲ್ಲ ಮಾಡಿಸಿದವರು ಯಾರು ಅನ್ನೋದು ಮಾತ್ರ ಬಹಿರಂಗವಾಗಿಲ್ಲ. ಪ್ರಕರಣ ತಾರ್ಕಿಕ ಅಂತ್ಯ ಕಾಣಲಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ. ರಾಜ್ಯದ ಪೊಲೀಸರೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಸಮರ್ಥರಿದ್ದಾರೆ. 40ಕ್ಕೂ ಅಧಿಕ ಶಾಸಕರನ್ನು ಗುರಿಯಾಗಿ ಇರಿಸಿಕೊಂಡಿರಬಹುದು ಎಂದು ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ತನಿಖೆಯಾಗಲೇಬೇಕು. ಯಾವ ರೀತಿ ತನಿಖೆ ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಎಂಇಎಸ್ ನಿಷೇಧ ಪರಿಹಾರ ಅಲ್ಲ:
ಕರ್ನಾಟಕ ಬಂದ್‍ನಿಂದ ಯಾರಿಗೂ ತೊಂದರೆ ಆಗಬಾರದು. ಎಂಇಎಸ್ ನಿಷೇಧ ಮಾಡುವುದು ಪರಿಹಾರ ಅಲ್ಲ. ನಿಷೇಧ ಮಾಡಿದ ಬಳಿಕ ಅವರು ಬೇರೆ ಹೆಸರಿನಲ್ಲಿ ಸಂಘಟನೆಗಳನ್ನು ಹುಟ್ಟು ಹಾಕುತ್ತಾರೆ. ಅಧಿಕೃತವಾಗಿ ಎಂಇಎಸ್ ಎಲ್ಲಿದೆ ಅನ್ನೋದೆ ಗೊತ್ತಿಲ್ಲ. ಅದು ನೋಂದಾಯಿತ ಸಂಘಟನೆಯಲ್ಲ. ಆದುದರಿಂದ, ನಿಷೇಧದ ಪ್ರಶ್ನೆಯೇ ಬರುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
30 ವರ್ಷಗಳ ಹಿಂದೆ ಇದ್ದಂತಹ ಕನ್ನಡ, ಮರಾಠಿ ಭಾಷಿಕರ ಸಂಘರ್ಷ ಈಗಿಲ್ಲ. ಸರಕಾರ ಯೋಜನೆ ಮತ್ತು ಕಾರ್ಯಕ್ರಮ ಹಾಕಿಕೊಂಡು ಭಾಷಾ ಸಂಘರ್ಷ ನಿಯಂತ್ರಿಸುವುದೇ ಒಳ್ಳೆಯದು. ಮರಾಠಿಗರು ಮುಖ್ಯವಾಹಿನಿಗೆ ಬರಬೇಕು. ನರೇಗಾದಲ್ಲಿ ಹೆಚ್ಚು ಉದ್ಯೋಗ ಕೊಡುತ್ತೇವೆ. ಇನ್ನು ಗಡಿ ವಿವಾದ ಮುಗಿದ ಹೋದ ಅಧ್ಯಾಯ ಎಂದು ಅವರು ಹೇಳಿದರು.