ಒಕ್ಕೂಟ ಸರ್ಕಾರದ ಯಾವುದೇ ಇಲಾಖೆ ಕರ್ನಾಟಕದೊಂದಿಗೆ ಸಂವಹನ ನಡೆಸುವಾಗ ಕನ್ನಡವನ್ನೇ ಬಳಸಬೇಕು: ಟಿ.ಎ.ನಾರಾಯಣಗೌಡ

ಬೆಂಗಳೂರು: ಒಕ್ಕೂಟ ಸರ್ಕಾರದ ಯಾವುದೇ ಇಲಾಖೆ ಕರ್ನಾಟಕದೊಂದಿಗೆ ಸಂವಹನ ನಡೆಸುವಾಗ ಕನ್ನಡವನ್ನೇ ಬಳಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಅವರು, ಡಿಸೆಂಬರ್ ನಿಂದ ಕರ್ನಾಟಕ ಸೇರಿ ಎಲ್ಲ ರಾಜ್ಯಗಳೊಂದಿಗೆ ಆಯಾ ರಾಜ್ಯ ಭಾಷೆಗಳೊಂದಿಗೆ ಸಂವಹನ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದಾಗಿ ವರದಿಯಾಗಿದೆ. ಇದು ಸ್ವಾಗತಾರ್ಹ ವಿಷಯ. ಇದಕ್ಕಾಗಿ ರಾಜಭಾಷಾ ವಿಭಾಗದಲ್ಲಿ ಪ್ರತ್ಯೇಕ ಇಲಾಖೆಯೊಂದನ್ನು ತೆರೆಯುವುದಾಗಿಯೂ ಅವರು ಹೇಳಿದ್ದಾರೆ. ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಮತ್ತು ಜನಸಾಮಾನ್ಯರೊಂದಿಗೆ ಅವರ ಭಾಷೆಯಲ್ಲೇ ಸಂವಹನ ನಡೆಸುವುದಾಗಿ ಅವರು ಹೇಳಿದ್ದಾರೆ. ಹಿಂದಿ ಹೇರಿಕೆ ವಿರುದ್ಧ ನಮ್ಮೆಲ್ಲರ ಸಂಘಟಿತ ಹೋರಾಟ ದಶಕಗಳಿಂದ ನಡೆದುಬಂದಿದೆ. ಕಳೆದ ಇಪ್ಪತ್ತಾರು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಇದೇ ವಿಷಯಗಳನ್ನಿಟ್ಟುಕೊಂಡು ಸತತ ಹೋರಾಟ ನಡೆಸುತ್ತಾ ಬಂದಿದೆ. ಈ ಹೋರಾಟದ ಬಿಸಿ ಕೊನೆಗೂ ಕೇಂದ್ರ ಸರ್ಕಾರವನ್ನು ಮುಟ್ಟಿದೆ ಎಂದು ಭಾವಿಸುತ್ತೇನೆ. ಮಾನ್ಯ ಗೃಹ ಸಚಿವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳನ್ನು ʻರಾಜಭಾಷೆʼಗಳೆಂದು ಗೌರವಿಸಬೇಕು ಮತ್ತು ಎಲ್ಲ ಭಾಷೆಗಳನ್ನು ಈ ದೇಶದ ಆಡಳಿತ ಭಾಷೆಗಳನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ತಂತ್ರಜ್ಞಾನ ವ್ಯಾಪಕವಾಗಿ ಬೆಳೆದಿದೆ. ನಾವೀಗ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕಾಲಘಟ್ಟದಲ್ಲಿ ಕಾಲಿಟ್ಟಿದ್ದೇವೆ. ಇಂಥ ಸಂದರ್ಭದಲ್ಲಿ ಭಾಷಾಂತರಕ್ಕೆ ಯಾವ ಸಮಸ್ಯೆಗಳೂ ಆಗುವುದಿಲ್ಲ. ನುರಿತ ಭಾಷಾಂತರಕಾರರನ್ನು ಸರ್ಕಾರ ನೇಮಿಸಿಕೊಂಡು ಎಲ್ಲ ಭಾಷೆಗಳಲ್ಲೂ ಸರ್ಕಾರಿ ಆದೇಶಗಳು, ನಡಾವಳಿಗಳು, ಪತ್ರ ವ್ಯವಹಾರಗಳನ್ನು ನಡೆಸಲು ಯಾವ ಸಮಸ್ಯೆಯೂ ಇಲ್ಲ. ಜಗತ್ತಿನ ಸಣ್ಣಪುಟ್ಟ ದೇಶಗಳೇ ಐದು ಮತ್ತು ಅದಕ್ಕಿಂತ ಹೆಚ್ಚಿನ ಆಡಳಿತ ಭಾಷೆಗಳನ್ನು ಹೊಂದಿವೆ. ಹೀಗಿರುವಾಗ ಭಾರತದಂಥ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಹೆಚ್ಚಿನ ಭಾಷೆಗಳು ಆಡಳಿತ ಭಾಷೆಯಾಗುವುದರಿಂದ ಯಾರಿಗೂ ಸಮಸ್ಯೆ ಇರುವುದಿಲ್ಲ. ಅಮಿತ್ ಶಾ ಅವರ ನೇತೃತ್ವದ ಗೃಹ ಇಲಾಖೆ ಸ್ಥಳೀಯ ಭಾಷೆಗಳಲ್ಲಿ ಸಂವಹನ ನಡೆಸಿದರೆ ಸಾಲದು. ಕನ್ನಡದಲ್ಲೇ ಎಲ್ಲ ಬಗೆಯ ಪತ್ರ ವ್ಯವಹಾರಗಳು ನಡೆಯಬೇಕು. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುವುದರಿಂದ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಸಂವಹನ ನಡೆಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಒಕ್ಕೂಟ ಸರ್ಕಾರ ಭಾರತ ಸಂವಿಧಾನಕ್ಕೆ ತಿದ್ದುಪಡಿ ತಂದು ಹಿಂದಿ ಭಾಷೆಗೆ ನೀಡಿರುವ ಆದ್ಯತೆಗಳನ್ನು ಎಲ್ಲ ಭಾರತೀಯ ಭಾಷೆಗಳಿಗೂ ನೀಡಿ, ನುಡಿ ಸಮಾನತೆಯನ್ನು ಜಾರಿಗೆ ತರಬೇಕು. ಭಾಷೆಗಳು ಸಮಾನವಾದರೆ ಭಾಷಿಕರಿಗೂ ಸಮಾನವಾದ ಹಕ್ಕು, ಅವಕಾಶಗಳು ದೊರೆತಂತಾಗುತ್ತದೆ. ಯಾವ ಭಾಷೆಯೂ ಮೇಲಲ್ಲ, ಯಾವ ಭಾಷೆಯೂ ಕೀಳಲ್ಲ. ಎಲ್ಲ ಭಾಷೆಗಳನ್ನು ಒಂದಾಗಿ ನೋಡಿ ಎಂಬುದು ನಮ್ಮ ದಶಕಗಳ ಬೇಡಿಕೆಯಾಗಿದೆ. ಹಿಂದಿಯನ್ನು ಆಡಳಿತ ಭಾಷೆ ಸ್ಥಾನಮಾನದಿಂದ ತೆಗೆಯಿರಿ ಎಂದು ನಾವು ಹೇಳುತ್ತಿಲ್ಲ. ಹಿಂದಿಯ ಜೊತೆ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳಿಗೆ ಆಡಳಿತ ಭಾಷೆಯ ಸ್ಥಾನಮಾನ ನೀಡಿ ಎಂದಷ್ಟೇ ಕೇಳುತ್ತಿದ್ದೇವೆ. ಹಾಗೆಯೇ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕ್ ಗಳು, ಗ್ರಾಮೀಣ ಬ್ಯಾಂಕ್ ಗಳು ಸೇರಿದಂತೆ ಹಣಕಾಸು ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಹಿಂದಿಹೇರಿಕೆಯ ನೀತಿಗಳಿಂದಾಗಿ ನೇಮಕಗೊಂಡು ಕೆಲಸ ಮಾಡುತ್ತಿರುವ ಎಲ್ಲ ಕನ್ನಡೇತರ ಅದರಲ್ಲೂ ವಿಶೇಷವಾಗಿ ಹಿಂದಿ ಭಾಷಿಕ ಅಧಿಕಾರಿ, ನೌಕರರನ್ನು ಕೇಂದ್ರ ಸರ್ಕಾರ ವಾಪಾಸ್ ಕರೆಯಿಸಿಕೊಂಡು ಅವರವರ ರಾಜ್ಯಕ್ಕೆ ಕಳುಹಿಸಬೇಕು. ಕರ್ನಾಟಕದ ಬ್ಯಾಂಕ್ ಗಳಲ್ಲಿ ಕನ್ನಡಿಗರಿಗಷ್ಟೇ ಲಭಿಸುವಂತಾಗಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಕನ್ನಡ ಗೊತ್ತಿಲ್ಲದ ಬ್ಯಾಂಕ್ ಸಿಬ್ಬಂದಿಯಿಂದ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಕನ್ನಡಿಗರು ಈಗ ಹಿಂದಿ ಹೇರಿಕೆ ಮತ್ತು ಹಿಂದಿಯನ್ನರ ಹೇರಿಕೆಯನ್ನು ಸಹಿಸುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಹಿಂದಿಯನ್ನು ಬಲವಂತವಾಗಿ ಇತರ ಭಾರತೀಯರ ಮೇಲೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಮೇಲೆ ಹೇರುವ ಪ್ರಕ್ರಿಯೆಯನ್ನು ನಾವು ಒಪ್ಪುವುದಿಲ್ಲ ಮತ್ತು ಸಹಿಸುವುದಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಭಾರತದ ಐಕ್ಯತೆ ಮತ್ತು ಸಮಗ್ರತೆಗೆ ಮಾರಕ. ಒಂದು ಭಾಷಿಕರ ಮೇಲೆ ಇನ್ನೊಂದು ಭಾಷೆಯನ್ನು ಹೇರುವುದು ಜನದ್ರೋಹ ಮತ್ತು ದೇಶದ್ರೋಹದ ಕ್ರಿಯೆ. ಮುಂದೆಯೂ ನಾವು ಇಂಥ ಹೇರಿಕೆಗಳ ವಿರುದ್ಧ ಧ್ವನಿಯೆತ್ತುತ್ತೇವೆ ಮತ್ತು ತೀವ್ರ ಸ್ವರೂಪದಲ್ಲಿ ಪ್ರತಿಭಟಿಸುತ್ತೇವೆ. ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ತ್ರಿಭಾಷಾ ಸೂತ್ರ ಬೇಕಾಗಿರಲಿಲ್ಲ. ಅದನ್ನು ನಮ್ಮ ಪೂರ್ವಜರು ಒಪ್ಪಿಕೊಂಡು ತಪ್ಪು ಮಾಡಿದ್ದಾರೆ. ಆ ತಪ್ಪನ್ನು ಸರಿಪಡಿಸುವ ಕಾಲ ಈಗ ಬಂದಿದೆ. ತಮಿಳುನಾಡಿನ ಹಾಗೆ ನಮ್ಮಲ್ಲೂ ದ್ವಿಭಾಷಾ ಸೂತ್ರ ಇರಬೇಕು. ನಮ್ಮ ಮಕ್ಕಳು ಪ್ರಥಮ ಭಾಷೆಯಾಗಿ ಕನ್ನಡವನ್ನೂ, ದ್ವಿತೀಯ ಭಾಷೆಯಾಗಿ ಇಂಗ್ಲಿಷನ್ನೂ ಕಲಿಯಲಿ. ಮೂರನೇ ಭಾಷೆಯ ಅಗತ್ಯ ನಮಗಿಲ್ಲ. ಉತ್ತರ ಭಾರತದಲ್ಲಿ ಅಲ್ಲಿನ ಮಕ್ಕಳು ಹಿಂದಿ ಮತ್ತು ಇಂಗ್ಲಿಷ್ ಎರಡೇ ಭಾಷೆಗಳನ್ನು ಕಲಿಯುತ್ತಾರೆ. ನಮ್ಮ ಮಕ್ಕಳಿಗೇಕೆ ಮೂರನೇ ಭಾಷೆಯ ಹೊರೆ? ಅದನ್ನು ತೆಗೆದುಹಾಕಲು ಕರ್ನಾಟಕ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಡಿಸೆಂಬರ್ ನಿಂದ ಕರ್ನಾಟಕ ಸೇರಿ ಎಲ್ಲ ರಾಜ್ಯಗಳೊಂದಿಗೆ ಆಯಾ ರಾಜ್ಯ ಭಾಷೆಗಳೊಂದಿಗೆ ಸಂವಹನ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದಾಗಿ ವರದಿಯಾಗಿದೆ. ಇದು ಸ್ವಾಗತಾರ್ಹ ವಿಷಯ. ಇದಕ್ಕಾಗಿ ರಾಜಭಾಷಾ ವಿಭಾಗದಲ್ಲಿ ಪ್ರತ್ಯೇಕ ಇಲಾಖೆಯೊಂದನ್ನು ತೆರೆಯುವುದಾಗಿಯೂ ಅವರು ಹೇಳಿದ್ದಾರೆ. ಮುಖ್ಯಮಂತ್ರಿಗಳು, ಸಂಸದರು, ಶಾಸಕರು…
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) March 22, 2025