ಹನಿಟ್ರ್ಯಾಪ್ ಪ್ರಕರಣ | ನನ್ನ ಮೇಲೆ ಯಾವುದೇ ಒತ್ತಡವಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಯಾವುದೇ ರೀತಿಯಲ್ಲಿ ಒತ್ತಡವಿಲ್ಲ. ಸಚಿವ ಕೆ.ಎನ್.ರಾಜಣ್ಣ ಅವರು ದೂರು ನೀಡಿದ ನಂತರ ತನಿಖೆ ಆರಂಭವಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹನಿಟ್ರ್ಯಾಪ್ ಯತ್ನ ಆರೋಪ ಸಂಬಂಧ ನಾನು ಈಗಾಗಲೇ ಉನ್ನತ ಮಟ್ಟದ ತನಿಖೆಯನ್ನು ಆದೇಶಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಯ ಸ್ವರೂಪ ಮತ್ತು ಮಟ್ಟವನ್ನು ನಿರ್ಧರಿಸುತ್ತಾರೆ. ಆದರೆ, ಕ್ರಮಕ್ಕೆ ಕಾರಣದ ಅವಶ್ಯಕತೆಯಿದೆ. ಆದ್ದರಿಂದ ದೂರು ದಾಖಲಾಗಬೇಕಿದೆ ಎಂದು ಹೇಳಿದರು.
ಈ ಬಗ್ಗೆ ತನಿಖೆ ನಡೆಸಲು ಸಚಿವ ಕೆ.ಎನ್.ರಾಜಣ್ಣ ಇನ್ನೂ ದೂರು ದಾಖಲಿಸಿಲ್ಲ. ಅವರು ಯಾವ ಕಾರಣಕ್ಕೆ ದೂರು ಸಲ್ಲಿಸಿಲ್ಲ ಎಂಬುದನ್ನು ಅವರನ್ನೇ ಕೇಳಬೇಕು. ನನ್ನನ್ನು ಕೇಳಿದರೆ ಹೇಗೆ?, ಸೂಕ್ತ ಎನಿಸಿದರೆ ಅವರು ದೂರು ದಾಖಲಿಸಬೇಕು. ನಂತರ ಇಲಾಖೆ ತನ್ನ ಕೆಲಸ ಪ್ರಾರಂಭಿಸಲಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಹನಿಟ್ರ್ಯಾಪ್ ಪ್ರಕರಣದ ತನಿಖೆಗೆ ನಿರ್ದೇಶನ ಕೋರಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತ ಪ್ರಶ್ನೆಗೆ ಉತ್ತರಿಸಿದ ಡಾ.ಜಿ.ಪರಮೇಶ್ವರ್, ಯಾವ ತೀರ್ಪು ಬರಲಿದೆ ಕಾದು ನೋಡೋಣ ಎಂದರು.