ಹನಿಟ್ರ್ಯಾಪ್ ಪ್ರಕರಣ | ಕಾನೂನು ಕ್ರಮಕ್ಕೆ ಒತ್ತಾಯಿಸಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಕೆ.ಎನ್.ರಾಜಣ್ಣ

ಬೆಂಗಳೂರು : ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿರುವ ‘ಹನಿಟ್ರ್ಯಾಪ್’ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ’ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ.
ಮಂಗಳವಾರ ಬೆಂಗಳೂರಿನ ಸದಾಶಿವನಗರದ ಡಾ.ಪರಮೇಶ್ವರ್ ಅವರ ಗೃಹ ಕಚೇರಿಯಲ್ಲಿ ಮನವಿ ಸಲ್ಲಿಸಿದ ಸಚಿವ ರಾಜಣ್ಣ, ‘ತನ್ನನ್ನು ಹನಿಟ್ರ್ಯಾಪ್‍ಗೆ ಸಿಲುಕಿಸಲು ಯತ್ನಿಸಿದ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ‘ಹನಿಟ್ರ್ಯಾಪ್’ಗೆ ಯತ್ನ ಆರೋಪ ಸಂಬಂಧ ಸಚಿವ ಕೆ.ಎನ್.ರಾಜಣ್ಣರ ಮನವಿ ಸ್ವೀಕರಿಸಿದ್ದು, ಯಾವ ಹಂತದಲ್ಲಿ, ಯಾರಿಂದ ತನಿಖೆಯಾಗಬೇಕು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ಹನಿಟ್ರ್ಯಾಪ್ ಯತ್ನದ ವಿಷಯ ಸದನದಲ್ಲಿ ಚರ್ಚೆಯಾಗಿರುವುದರಿಂದ ಸುಮೋಟೋ(ಸ್ವಯಂಪ್ರೇರಿತ ದೂರು) ಪ್ರಕರಣ ದಾಖಲಿಸಲು ಬರುವುದಿಲ್ಲ. ಸ್ಪೀಕರ್ ಅವರು ಸುಮೋಟೋ ದಾಖಲಿಸುವಂತೆ ಸೂಚಿಸಬಹುದಿತ್ತು. ಅವರು ಹೇಳಿದ್ದರೆ ಬೇರೆ ವಿಷಯವಾಗುತ್ತಿತ್ತು. ಆ ರೀತಿ ಆಗಿಲ್ಲ. ವಿಷಯ ಸದನದಲ್ಲಿ ಪ್ರಸ್ತಾಪವಾಗುವ ಮೊದಲು ಸಚಿವ ರಾಜಣ್ಣ ಅವರಾಗಲಿ ಮತ್ತು ಅವರ ಪುತ್ರ ಆರ್.ರಾಜೇಂದ್ರ ಅವರಾಗಲಿ ನನ್ನ ಬಳಿ ಚರ್ಚಿಸಿಲ್ಲ’ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದರು.
‘ಹನಿಟ್ರ್ಯಾಪ್‍ಗೆ ಯತ್ನ ಆಗಿದೆ ಎಂಬ ವಿಷಯ ಸದನದಲ್ಲಿ ಚರ್ಚೆಗೆ ಬಂದಾಗ, ನನ್ನ ಮೇಲೆ ಪ್ರಯತ್ನ ಆಗಿದೆ ಎಂದು ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದ್ದರು. ಗೃಹ ಸಚಿವರಿಗೆ ಮನವಿ ಕೊಡುತ್ತೇನೆ, ಕ್ರಮ ತೆಗೆದುಕೊಳ್ಳಬೇಕು ಎಂದಿದ್ದರು. ಸದನದಲ್ಲಿ ಚರ್ಚೆಯಾಗಿರುವ ಹಿನ್ನೆಲೆಯಲ್ಲಿ ಮನವಿ ನೀಡಿದ್ದಾರೆ. ಇದರ ಆಧಾರದ ಮೇಲೆ ಮುಂದೆ ಏನು ಮಾಡಬೇಕು ಎಂಬುದನ್ನು ಕಾನೂನು ತಜ್ಞರು ಮತ್ತು ಸಿಎಂ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
‘ಪೂರ್ವನಿಯೋಜಿತ ಕಾರ್ಯಕ್ರಮಗಳಿದ್ದ ಹಿನ್ನೆಲೆಯಲ್ಲಿ ಮನವಿ ನೀಡಲು ಆಗಿಲ್ಲ ಎಂದು ರಾಜಣ್ಣ ಅವರೇ ಹೇಳಿದ್ದರು. ಈಗ ಮನವಿ ಸಲ್ಲಿಸಿದ್ದಾರೆ. ಅವರು ನೀಡಿರುವ ಮನವಿಯಲ್ಲಿನ ಅಂಶಗಳನ್ನು ಬಹಿರಂಗಪಡಿಸುವುದಿಲ್ಲ ಎಂದ ಅವರು, ಈ ಬಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್‍ನ ತೀರ್ಪಿಗಾಗಿ ಕಾಯುವುದಿಲ್ಲ. ಅದನ್ನು ಪ್ರತ್ಯೇಕವಾಗಿ ಪರಿಗಣಿಸುತ್ತೇವೆ’ ಎಂದು ಪರಮೇಶ್ವರ್ ತಿಳಿಸಿದರು.
ಕೆಟ್ಟ ಚಾಳಿ ಮುಂದುವರಿಯಬಾರದು: ‘ಹನಿಟ್ರ್ಯಾಪ್‍ನಂತಹ ಕೆಟ್ಟ ಚಾಳಿ ಸಾರ್ವಜನಿಕ ಜೀವನದಲ್ಲಿ ಮುಂದುವರಿಯಬಾರದು ಎಂಬ ಉದ್ದೇಶದಿಂದ ಕಾನೂನು ಕ್ರಮಕ್ಕಾಗಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಮಾಧ್ಯಮಗಳಲ್ಲಿ ತುಮಕೂರಿನ ಪ್ರಭಾವಿ ಸಚಿವರು ಎಂದು ಸುದ್ದಿಯಾಗುತ್ತಿತ್ತು. ತುಮಕೂರಿನ ಸಚಿವರು ಅಂದರೆ ನಾನು, ಪರಮೇಶ್ವರ್ ಇಬ್ಬರೇ ಇರುವುದು. ಈ ಕಾರಣಕ್ಕೆ ಸದನದಲ್ಲಿ ನಾನು ಪ್ರಸ್ತಾಪ ಮಾಡಿದ್ದೆ. ದೂರು ನೀಡಿದರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದರು. ಹೀಗಾಗಿ ಮನವಿ ಸಲ್ಲಿಸಿದ್ದೇನೆ.
ಈ ಪ್ರಕರಣದಲ್ಲಿ ನ್ಯಾಯಾಧೀಶರು ಇದ್ದಾರೆಂದು ನಾನು ಹೇಳಿಲ್ಲ. ರಾಜ್ಯದವರು ಇದ್ದಾರೆ, ಹೊಸದಿಲ್ಲಿಯವರು ಇದ್ದಾರೆಂದು ಹೇಳಿದ್ದೆ. ನ್ಯಾಯಾಧೀಶರ ಬಗ್ಗೆ ನಾನು ಎಲ್ಲಿಯೂ ಉಲ್ಲೇಖಿಸಿ ಹೇಳಿಲ್ಲ. ನಾನು ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ಮೂರು ದಿನಗಳಿಂದ ನನಗೆ ಬಿಡುವಿರಲಿಲ್ಲ. ಹಾಗಾಗಿ ಇಂದು (ಮಾ.25ಕ್ಕೆ) ಗೃಹ ಸಚಿವರಿಗೆ ಮನವಿ ಕೊಟ್ಟಿದ್ದೇನೆ’
-ಕೆ.ಎನ್.ರಾಜಣ್ಣ ಸಹಕಾರ ಸಚಿವ